Site icon Vistara News

Accident Case : ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು; ಫುಟ್‌ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ

Accident Case

ಮಂಡ್ಯ: ತುತುಕುಡಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ (Accident Case) ಹೊಡೆದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾಳೆ. ಮಂಡ್ಯದ ಕನಕ ಭವನದ ಹಿಂಭಾಗ ರೈಲ್ವೆ ಟ್ರಾಕ್‌ನಲ್ಲಿ ಘಟನೆ ನಡೆದಿದೆ. ಲಾವಣ್ಯ (18) ಗಂಭೀರ ಗಾಯಗೊಂಡವಳು.

ಲಾವಣ್ಯ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶುಕ್ರವಾರ ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗುವಾಗ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು ಗುದ್ದಿದೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಗಾಯಾಳು ಲಾವಣ್ಯಳನ್ನು ಸ್ಥಳೀಯರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ವಾಹನ

ಬೆಂಗಳೂರಿನ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನವೊಂದು ಏಕಾಏಕಿ ಫುಟ್ ಪಾತ್ ಏರಿ ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ. ಅಪಘಾತದ ಭೀಕರತೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುರುವಾರ (ಜೂ.20) ಮಧ್ಯಾಹ್ನ 2.30ಕ್ಕೆ ಅಪಘಾತ ನಡೆದಿದೆ. ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನಿಂತಿದ್ದ ಸವಾರನಿಗೆ ಮೊದಲು ಪಿಕಪ್‌ ವಾಹನ ಡಿಕ್ಕಿ ಹೊಡೆದು, ಬಳಿಕ ಅಂಗಡಿಗೆ ನುಗ್ಗಿದೆ. ಘಟನೆಯಲ್ಲಿ ಸವಾರನಿಗೆ ಕಾಲು ಮುರಿದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಮಗುವಿನ ಮೇಲೆ ಹರಿದ ಲಾರಿ; ಕಟುಕ ಚಾಲಕ ಪರಾರಿ

ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಲಕಮನಗುಳೆಯಲ್ಲಿ ಘಟನೆ ನಡೆದಿದೆ. ಲಕಮನಗುಳೆಯ ಮಂಜುನಾಥ ಗುಂಟಾಪುರ (31) ಆತ್ಮಹತ್ಯೆ ಮಾಡಿಕೊಂಡವನು. ಕಳೆದ ಜೂನ್‌ 19ರಂದು ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಮಂಜುನಾಥ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಕೊಪ್ಪಳದ ಜಿಲ್ಲಾಸ್ಪತ್ರೆ ಬಳಿಕ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಜುನಾಥ್‌ ಮೃತಪಟ್ಟಿದ್ದಾನೆ. ತಾಯಿಯ ಹೆಸರಿನಲ್ಲಿ ಬೇವೂರಿನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 2 ಲಕ್ಷ ಬೆಳೆ ಸಾಲ ಮಾಡಿದ್ದ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈಜಲು ಹೋಗಿ ನೀರುಪಾಲಾಗಿದ್ದ ಬಾಲಕರಿಬ್ಬರ ಶವ ಪತ್ತೆ

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದರು. ಇದೀಗ ಬಾಲಕರ ಮೃತದೇಹಗಳು ಪತ್ತೆಯಾಗಿವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದ್ಯಾಳ ಗ್ರಾಮದ‌ ಬಳಿ ಘಟನೆ ನಡೆದಿತ್ತು. ಮಹ್ಮದ್ ತೌಸಿಫ್ ಮುಜಾವರ್ (15), ಮೊಹಮ್ಮದ್‌ ಸಮೀರ್ (13) ಮೃತ ದುರ್ದೈವಿಗಳು.

ಮೃತ ಬಾಲಕರು ಹರಪನಹಳ್ಳಿ ನಗರದ ವಾರ್ಡ್ ನಂಬರ್ 10 ರ ಸಿಲಾರಗೇರಿ ಓಣಿ ನಿವಾಸಿಯಾಗಿದ್ದರು. ಪಾಲಕರೊಂದಿಗೆ ನಂದ್ಯಾಳ ಗ್ರಾಮದ ಹಜರತ್ ಸೈಯದ್ ಚಮನ್ ಷಾ ವಲಿ ದರ್ಗಾಕ್ಕೆ ತೆರಳಿದ್ದರು. ಈ ವೇಳೆ ತುಂಗಭದ್ರಾ ನದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಕಳೆದ ಮೂರು ದಿನಗಳ ಹಿಂದೆ ನೀರುಪಾಲಾಗಿದ್ದ ಬಾಲಕರ ಮೃತದೇಹಗಳು ಶುಕ್ರವಾರ ಪತ್ತೆಯಾಗಿದೆ. ಹಲವಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version