Site icon Vistara News

Accident In Delhi | ಅಪಘಾತದ ಬರ್ಬರತೆಗೆ ಅಂಜಲಿಯ ಮೆದುಳೇ ನಾಪತ್ತೆ, ಮುರಿದ ಬೆನ್ನೆಲುಬು

Sultanpuri Death Case

ನವ ದೆಹಲಿ: ರಾಜಧಾನಿಯಲ್ಲಿ ಹೊಸ ವರ್ಷಾಚರಣೆಯ ತಡರಾತ್ರಿ ನಡೆದ ಬರ್ಬರ ಅಪಘಾತದಲ್ಲಿ ಮೃತಪಟ್ಟ ಯುವತಿ ಅಂಜಲಿಯ ಶವಪರೀಕ್ಷೆಯಿಂದ ಹೊರಬಿದ್ದಿರುವ ವಿವರಗಳು ಬೆಚ್ಚಿಬೀಳಿಸುವಂತಿವೆ.

ಮದ್ಯ ಸೇವಿಸಿ ಮತ್ತರಾಗಿದ್ದ ಯುವಕರು ಕಾರಿನಡಿಗೆ ಯುವತಿಯನ್ನು ಸಿಲುಕಿಸಿ ಹದಿಮೂರು ಕಿಲೋಮೀಟರ್‌ ಎಳೆದುಕೊಂಡು ಹೋದ ಪರಿಣಾಮ ಅಂಜಲಿಯ ತಲೆಬುರುಡೆ ಒಡೆದು ಬಿಚ್ಚಿಕೊಂಡಿದೆ. ಮೆದುಳಿನ ಒಳಭಾಗ ನಾಪತ್ತೆಯಾಗಿದೆ. ಬೆನ್ನೆಲುಬು ಫ್ರಾಕ್ಚರ್‌ ಆಗಿದೆ. ದೇಹಾದ್ಯಂತ 40 ಗಾಯಗಳು ಕಂಡುಬಂದಿವೆ.

ದೆಹಲಿಯ ಮೌಲಾನಾ ಅಜಾದ್‌ ಮೆಡಿಕಲ್‌ ಕಾಲೇಜು (MAMC) ವೈದ್ಯರು ನಡೆಸಿದ ಶವಪರೀಕ್ಷೆಯಲ್ಲಿ ಈ ವಿವರಗಳು ಪತ್ತೆಯಾಗಿವೆ. ಹತ್ತಾರು ಕಿಲೋಮೀಟರ್‌ ಎಳೆದುಕೊಂಡು ಹೋದದ್ದರಿಂದ ಮೆದುಳಿನ ಒಳಭಾಗವೇ ನಾಪತ್ತೆಯಾಗಿದೆ. ಎದೆಯ ಹಿಂಭಾಗದಿಂದ ಪಕ್ಕೆಲುಬುಗಳು ಮುರಿದು ಹೊರಚಾಚಿಕೊಂಡಿವೆ. ಆಕೆಯ ದೇಹವಿಡೀ ದೂಳು ಮಣ್ಣಿನಿಂದ ಆವೃತವಾಗಿದೆ. ಮೈಯ ಮೂಳೆಗಳೆಲ್ಲಾ ಜಜ್ಜಿಹೋಗಿವೆ. ಬೆನ್ನೆಲುಬು ಮುರಿದಿದೆ. ಶ್ವಾಸಕೋಶ ಇರಬೇಕಾದ ಜಾಗದಲ್ಲಿಲ್ಲದೆ ಹೊರಬಂದಿದೆ. ಗಾಯಗಳಲ್ಲಿ ಸಾವಿಗೆ ಮುನ್ನ, ಸಾವಿಗೂ ನಂತರದ ಗಾಯಗಳಿವೆ ಎಂಬಿತ್ಯಾದಿ ವಿವರಗಳನ್ನು ವೈದ್ಯರು ನೀಡಿದ ಎಂಟು ಪುಟಗಳ ವಿವರವಾದ ವರದಿ ತಿಳಿಸಿದೆ.

ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಯುವಕರು ಚಲಾಯಿಸುತ್ತಿದ್ದ ಬ್ಯಾಲೆನೋ ಕಾರು ಗುದ್ದಿದ್ದರಿಂದ ಅಂಜಲಿ ಪ್ರಯಾಣಿಸುತ್ತಿದ್ದ ಸ್ಕೂಟಿ ಅದರಡಿಗೆ ಬಿದ್ದಿತ್ತು. ಅಂಜಲಿಯ ಕಾಲು ಕಾರಿನಡಿಗೆ ಸಿಲುಕಿಕೊಂಡು, ಶವವನ್ನು ಹತ್ತಾರು ಕಿಲೋಮೀಟರ್‌ಗಟ್ಟಲೆ ಎಳೆದುಕೊಂಡು ಕಾರನ್ನು ಚಲಾಯಿಸಲಾಗಿತ್ತು. ಕಾರಿನಲ್ಲಿದ್ದ ಐವರು ಯುವಕರನ್ನು ಬಂಧಿಸಿ ಪೊಲೀಸ್‌ ಕಸ್ಟಡಿಯಲ್ಲಿಡಲಾಗಿದೆ. ಅಂಜಲಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದುದು ಕಂಡುಬಂದಿಲ್ಲ.

ಇದನ್ನೂ ಓದಿ | Accident In Delhi | ಮೈತುಂಬ ಬಟ್ಟೆ ತೊಟ್ಟು ಹೋದ ನನ್ನ ಮಗಳು ಸಿಕ್ಕಿದ್ದು ನಗ್ನವಾಗಿ, ಇದೆಂಥಾ ಅಪಘಾತ?-ದೆಹಲಿ ಯುವತಿ ತಾಯಿಯ ಪ್ರಶ್ನೆ

Exit mobile version