ಅಲಿಗಢ: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಅಲಿಗಢದ ಠಾಣೆಯೊಂದರಲ್ಲಿ ಪೊಲೀಸ್ ಕೈಯಲ್ಲಿದ್ದ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಡಿಸೆಂಬರ್ 8ರಂದು ಪಾಸ್‌ಪೋರ್ಟ್ ದೃಢೀಕರಣಕ್ಕಾಗಿ (Passport Verification) ಪೊಲೀಸ್ ಠಾಣೆಗೆ ಆಗಮಿಸಿದ್ದ ಇಶ್ರತ್ (55 ವರ್ಷ) ಅವರಿಗೆ ಗುಂಡು ತಗುಲಿತ್ತು. ಘಟನೆಯ ಸಿಸಿ ಟಿವಿ ಕ್ಯಾಮೆರಾ ದೃಶ್ಯ ವೈರಲ್ ಆಗಿತ್ತು. ಗುಂಡು ಹಾರಿಸಿದ ಪೊಲೀಸ್‌ನನ್ನು ಮನೋಜ್ ಶರ್ಮ ಎಂದು ಗುರುತಿಸಲಾಗಿದೆ. ಅವರು ಪರಾರಿಯಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಇಶ್ರತ್ ಸೌದಿ ಅರೆಬಿಯಾಗೆ ಭೇಟಿ ನೀಡಲು ಯೋಜಿಸಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್ ದೃಢೀಕರಣಕ್ಕಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಒಬ್ಬರ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿ ಆಕೆಯ ದೇಹವನ್ನು ಹೊಕ್ಕಿತ್ತು. ಕೂಡಲೇ ಕುಸಿದು ಬಿದ್ದಿದ್ದರು. ಈ ಎಲ್ಲ ಕ್ಷಣಗಳ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯ ಕುಟುಂಬದವರು ಮಾತ್ರ ಬೇರೆಯದ್ದೇ ಆರೋಪ ಮಾಡುತ್ತಿದ್ದಾರೆ. ಠಾಣಾಧಿಕಾರಿ, ಪಾಸ್‌ಪೋರ್ಟ್ ದೃಢೀಕರಣ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ಕಾರಣಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಅಧಿಕಾರಿ ಆಕೆಗೆ ಗುಂಡು ಹೊಡೆದಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
Unbelievable. Cop accidentally shoots woman in the head inside police station during passport police verification visit in Aligarh, UP. Woman critical, in ICU. pic.twitter.com/ZbjowHNTzg
— Shiv Aroor (@ShivAroor) December 8, 2023
ʼʼಪಾಸ್‌ಪೋರ್ಟ್ ವಿಚಾರಣೆಗಾಗಿ ಆಕೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು. ಆಕೆಗೆ ಹಣಕ್ಕಾಗಿ ಕರೆಗಳು ಬರುತ್ತಿದ್ದವು. ಹಣದ ಬೇಡಿಕೆಯ ಬಗ್ಗೆ ತಿಳಿದಿಲ್ಲ. ಅವರ ನಡುವೆ ಜಗಳವಾಗಿತ್ತುʼʼ ಎಂದು ಇಶ್ರತ್ ಸಂಬಂಧಿ ಜೀಶನ್ ಹೇಳಿದ್ದಾರೆ. ಗುಂಡೇಟು ತಿಂದ ಮಹಿಳೆಯು ತನ್ನ ಸರದಿಗಾಗಿ ನಿಂತಿರುತ್ತಾರೆ. ಆಗ ಪೊಲೀಸ್ ಒಬ್ಬ ಬಂದು ಮತ್ತೊಬ್ಬ ಪೊಲೀಸನಿಗೆ ಬಂದೂಕು ನೀಡುತ್ತಾನೆ. ಆಗ ಆ ಪೊಲೀಸ್ ಗನ್ ಪರೀಕ್ಷಿಸುತ್ತಾನೆ. ಈ ವೇಳೆ ಗುಂಡ ಹಾರಿ ನೇರವಾಗಿ ಮಹಿಳೆಗೆ ತಾಗುತ್ತಿರುವ ದೃಶ್ಯಗಳನ್ನು ವಿಡಿಯೊದಲ್ಲಿ ಕಂಡು ಬಂದಿದೆ.
ನಿರ್ಲಕ್ಷ್ಯದ ಕಾರಣ ಇನ್‌ಸ್ಪೆಕ್ಟರ್ ಮನೋಜ್ ಶರ್ಮ ಅವರನ್ನು ಅಮಾನತುಗೊಳಿಸಲಾಗಿತ್ತು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಲಿಗಢ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಹೇಳಿದ್ದಾರೆ. ಪೊಲೀಸ್ ಬಂದೂಕಿನಿಂದ ಹಾರಿದ ಗುಂಡು ಮಹಿಳೆಯ ಬೆನ್ನಿಗೆ ಬಿದ್ದಿದೆ. ತಲೆಮರೆಸಿಕೊಂಡಿರುವ ಆರೋಪಿ ಪೊಲೀಸನನ್ನು ಹಿಡಿಯಲು ತಂಡವನ್ನು ರಚಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಇಶ್ರತ್ ಅವರಿಗೆ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಯಿತು ಆದರೆ ಅವರ ಸ್ಥಿತಿ ಹದಗೆಡುತ್ತಲೇ ಇತ್ತು. ಅವರು ಬುಧವಾರ ತಡರಾತ್ರಿ ನಿಧನರಾದರು. ಶವವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆʼʼ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಮೊಹಮ್ಮದ್ ಹ್ಯಾರಿಸ್ ತಿಳಿಸಿದ್ದಾರೆ.
“ಮನೋಜ್ ಶರ್ಮ ಅವರ ಸುಳಿವು ನೀಡುವವರಿಗೆ 20,000 ರೂ.ಗಳ ಬಹುಮಾನವನ್ನು ಘೋಷಿಸಿದ್ದೇವೆ ಮತ್ತು ಅವರ ಛಾಯಾಚಿತ್ರಗಳನ್ನು ಅನೇಕ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದೇವೆ. ಈ ಹಿಂದೆ ಮನೋಜ್ ಶರ್ಮ ಜತೆಗಿದ್ದ ಕಾನ್ಸ್‌ಸ್ಟೇಬಲ್ ಸುದೀಪ್ ಅವರನ್ನು ಅಲಿಗಢ ಪೊಲೀಸರು ಇಟಾವಾದ ಟಾಕಿಪುರ ಗ್ರಾಮದಿಂದ ಬಂಧಿಸಿದ್ದಾರೆ” ಎಂದು ನೈಥಾನಿ ಹೇಳಿದರು.
ಇದನ್ನೂ ಓದಿ: Viral News: ಹಸಿವಿನಿಂದ ಭಿಕ್ಷುಕ ಸಾವು; ಆತನ ಬಳಿ ಇತ್ತು 1 ಲಕ್ಷ ರೂ!