Site icon Vistara News

Actor Darshan: ಒಗ್ಗದ ಜೈಲೂಟ, ದರ್ಶನ್- ಪವಿತ್ರಾ ಗೌಡ ಪರದಾಟ

Actor Darshan Judicial Custody Jailer Gave UTP Number

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ನಟ ದರ್ಶನ್‌ (Actor Darshan), ಜೈಲೂಟ ಸೇರದೆ ಪರದಾಡುತ್ತಿದ್ದಾನೆ. ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಸಹ ಜೈಲಿನ ಆಹಾರ ಇಷ್ಟವಾಗದೆ ಒದ್ದಾಡುತ್ತಿದ್ದಾರೆ.

ಮೊದಲೇ ಫಿಟ್ನೆಸ್ ಮೇಂಟೇನ್ ಮಾಡಲು‌ ಚಿಕನ್, ಮಟನ್, ಪ್ರೂಟ್ಸ್, ಜೂಸ್ ಸೇವಿಸುತ್ತಿದ್ದ ದರ್ಶನ್, ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾನೆ. ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದಾರೆ. ಜೈಲೂಟ ತಿನ್ನಲಾಗದೆ ದರ್ಶನ್ ಪರದಾಟ ಅನುಭವಿಸಿದ್ದಾನೆ.

ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ವಿಲವಿಲ ಒದ್ದಾಡಿದ್ದು ಕಂಡುಬಂತು. ರಾತ್ರಿ ಸಹ ತಡವಾಗಿ ನಿದ್ರೆಗೆ ಜಾರಿದ ದರ್ಶನ್ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದು, ಕಾಫಿ ಸೇವಿಸದೆ ಬಿಸಿ ನೀರು ಕೇಳಿ ಪಡೆದಿದ್ದಾನೆ. ಸಹಕೈದಿಗಳು ಮಾತನಾಡಲು ಯತ್ನಿಸಿದರೂ ಅಷ್ಟಾಗಿ ಅವರ ಜೊತೆ ಬೆರೆಯಲಿಲ್ಲ. ʼನಿಮ್ಮ ಸಹವಾಸ ಸಾಕಪ್ಪ. ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿʼ ಎಂದು ಕೊಠಡಿಯಲ್ಲಿ ಸುಮ್ಮನೆ ಕೂತಿದ್ದಾನೆ ಎಂದು ಗೊತ್ತಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಶೇಷ ಬ್ಯಾರಕ್‌ನಲ್ಲಿ ದರ್ಶನ್ ಇದ್ದಾನೆ. ಧನರಾಜ್, ವಿನಯ್, ಪ್ರದೂಶ್ ಜೊತೆ ಒಂದೇ ‌ಕೊಠಡಿಯಲ್ಲಿಡಲಾಗಿದೆ. ಸೆರೆವಾಸದಲ್ಲಿ ನಟ ಚಡಪಡಿಸುತ್ತಿದ್ದು, ಮೌನಕ್ಕೆ ಜಾರಿದ್ದಾನೆ. ಸಹ ಬಂದಿಗಳ ಜೊತೆ ಭದ್ರತಾ ವಿಭಾಗದ ಬ್ಯಾರಕ್‌ನಲ್ಲಿ ಸೆರೆವಾಸದಲ್ಲಿಡಲಾಗಿದೆ. ಸೊಳ್ಳೆಕಾಟದಿಂದ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ನಲುಗಿದ್ದಾರೆ.

ನಿನ್ನೆ ಭಾನುವಾರ ಆಗಿದ್ದರಿಂದ ಕುಟುಂಬಸ್ಥರು ಮತ್ತು ಆಪ್ತರ ಭೇಟಿಗೆ ಅವಕಾಶ ನೀಡಿಲ್ಲ. ಇಂದು ದರ್ಶನ್ ಮತ್ತು ಪವಿತ್ರಾ ಕುಟುಂಬಸ್ಥರು ಹಾಗೂ ಆಪ್ತರ ಭೇಟಿ ಸಾಧ್ಯತೆ ಇದೆ. ಪವಿತ್ರಾ ಗೌಡ ಕೂಡ ಜೈಲು ಮೆನುವಿನಂತೆ ಚಪಾತಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ಸೇವನೆ ಮಾಡಿದ್ದು, ಸಹಖೈದಿಗಳ ಜೊತೆ ಬೆರೆಯದೆ ಬೇಸರದಲ್ಲಿಯೇ ದಿನ ಕಳೆಯುತ್ತಿದ್ದಾರೆ. ರಾತ್ರಿ ಬೇಗ ಮಲಗಿದರೂ ಪದೇ ಪದೆ ಎಚ್ಚರಗೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.

ನಿನ್ನೆ ದರ್ಶನ್ ಭೇಟಿಗೆ ರಾಯಚೂರಿನ ಲಿಂಗಸಗೂರಿನಿಂದ ಆಗಮಿಸಿದ ಅಭಿಮಾನಿಗಳು ಭೇಟಿಗೆ ಅವಕಾಶ ಸಿಗದೆ ಜೈಲಿನ ಬಳಿ ಕಣ್ಣೀರು ಹಾಕಿದರು. ಎದೆಯ ಮೇಲೆ ದರ್ಶನ್ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿ, ʼನಮ್ಮ ಬಾಸ್ ಕೆಟ್ಟದ್ದು ಮಾಡಿರಬಹುದು. ಆದರೆ ನಮ್ಮ ಬಾಸ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆʼ ಎಂದಿದ್ದಾರೆ. ʼಇಂದು ರಜೆ ಹಿನ್ನೆಲೆ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡುವುದುʼ ಎಂದಿದ್ದಾರೆ.

ಹೇಗಿದೆ ಕೊಠಡಿ?

ಜೈಲಿನ ಮೂರನೇ ಸೆಕ್ಟರ್ ಭಾಗದಲ್ಲಿ ಇರುವ ಭದ್ರತಾ ವಿಭಾಗದಲ್ಲಿ ಒಂದು ಕೊಠಡಿ ದರ್ಶನ್‌ಗೆ ನೀಡಲಾಗಿದೆ. ಇಲ್ಲಿ ಹೊರಗಿನ ಕೈದಿಗಳಿಗೆ ಬರಲು ಅವಕಾಶ ಇಲ್ಲ. ಭದ್ರತಾ ವಿಭಾಗದ ಸಿಬ್ಬಂದಿ ಹಾಗೂ ಕೈದಿಗಳಿಗೆ ಅಷ್ಟೇ ಅವಕಾಶ ನೀಡಲಾಗಿದೆ. ದರ್ಶನ್ ಹಾಗೂ ವಿನಯ್ ಒಂದೇ ಕೊಠಡಿಯಲ್ಲಿ ಇದ್ದಾರೆ. ಪ್ರದೂಷ್ ಹಾಗೂ ಧನರಾಜ್ ಮತ್ತೊಂದು ಕೊಠಡಿಯಲ್ಲಿ ಸೆರೆವಾಸದಲ್ಲಿದ್ದಾರೆ. ಕೊಠಡಿಯ ಒಳಗೆ ಅಟ್ಯಾಚ್ ಬಾತ್ ರೂಮ್ ಕೂಡ ಇದೆ. ಮಲಗಲು ಚಾಪೆ ಹಾಗೂ ಬೆಡ್ ಶೀಟ್ ನೀಡಲಾಗಿದೆ. ದರ್ಶನ್ ಇರುವ ಕೊಠಡಿಯಲ್ಲಿ ಯಾವುದೇ ಟಿವಿ ವ್ಯವಸ್ಥೆ .ಇಲ್ಲ. ಕೊಠಡಿಯ ಒಳಗೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ ಯಾರಾದರೂ ಭೇಟಿಗೆ ಬಂದರೆ ಅವರನ್ನು ಸಿಬ್ಬಂದಿ ಕರೆದೊಯ್ದು ಭೇಟಿ ಮಾಡಿಸುತ್ತಾರೆ. ಭದ್ರತಾ ವಿಭಾಗದ ಸುತ್ತಮುತ್ತ ಯಾವಾಗಲೂ ಪೊಲೀಸ್ ಕಣ್ಗಾವಲು ಇರುತ್ತದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನ್ನೆರಡು ದಿನಗಳ ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್‌ನನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ‌ ಜೈಲು ಸೇರುವಂತಾಗಿದೆ.

ಇದನ್ನೂ ಓದಿ: Actor Darshan: ದರ್ಶನ್ ಹಾಗೂ ನನ್ನ ಮಧ್ಯೆ ಮನಸ್ತಾಪ ತಂದಿದ್ದೇ ನಟಿ ನಿಖಿತಾ ಎಂದ ಓಂ ಪ್ರಕಾಶ್!

Exit mobile version