ಬೆಂಗಳೂರು: ಆರ್‌ಆರ್ ನಗರದಲ್ಲಿ ನಡೆದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ, ನಟ ದರ್ಶನ್ (Actor Darshan) ಹಾಗೂ ಈತನ ಗ್ಯಾಂಗ್ (D boss Gang) ವಿರುದ್ಧ ಸಾಕ್ಷಿಯಾಗಿ (evidence) 139ಕ್ಕೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 28 ಸ್ಥಳಗಳಲ್ಲಿ ಮಹಜರು ನಡೆಸಲಾಗಿದೆ.
ಆರೋಪಿಗಳು ಧರಿಸಿದ್ದ ಬಟ್ಟೆ, ಶೆಡ್‌ನಲ್ಲಿ ಹಲ್ಲೆಗೆ ಬಳಸಿದ್ದ ಲಾಠಿ, ಮರದ ರಿಪೀಸ್ ವಸ್ತುಗಳು, ತುಳಿದ ಶೂಗಳು, ಆರೋಪಿಗಳು ತಂಗಿದ್ದ ಹೋಟೆಲ್ ಲೆಡ್ಜರ್ ಬುಕ್, ಸಿಸಿಟಿವಿ ರೆಕಾರ್ಡ್, ಕೃತ್ಯದ ವೇಳೆ ಹಾಗೂ ಶವ ಬಿಸಾಡಲು ಬಳಸಿದ್ದ ಕಾರುಗಳು, ಆರೋಪಿಗಳು ಪಡೆದುಕೊಂಡಿದ್ದ ಹಣ, ಆರೋಪಿಗಳ ಮೊಬೈಲ್ ಪೋನ್, ಕಾರ್ ಶೆಡ್ ಕಡೆ ಹೋಗುವ ಸಿಸಿಟಿವಿ ರೆಕಾರ್ಡ್, ಮೃತದೇಹದ ಮೇಲಿಂದ ಕಳುವಾಗಿದ್ದ ಚಿನ್ನಾಭರಣ ಸೇರಿದಂತೆ ಒಟ್ಟು 139 ವಸ್ತು ಸೀಜ್ ಮಾಡಲಾಗಿದೆ.
ಪ್ರಕರಣದಲ್ಲಿ ಇದುವರೆಗೂ 28 ಕಡೆ ಮಹಜರ್ ಮಾಡಲಾಗಿದೆ. ದರ್ಶನ್ ಸೇರಿ ಎಲ್ಲ 17 ಆರೋಪಿಗಳ ನಿವಾಸ ಹಾಗೂ ಬೇರೆ 11 ಸ್ಥಳಗಳಲ್ಲೂ ಮಹಜರ್ ನಡೆಸಲಾಗಿದೆ. ರೇಣುಕಾಸ್ವಾಮಿ ಕರೆತಂದು ಹಲ್ಲೆ ಕೃತ್ಯ ನಡೆಸಿದ ಪಟ್ಟಣಗೆರೆ ಶೆಡ್, ರೇಣುಕಾಸ್ವಾಮಿಯ ಶವ ಬಿಸಾಡಿದ ರಾಜಕಾಲುವೆ, ಶವ ಬಿಸಾಡಿದ್ದ ಆರೋಪಿಗಳು ತಂಗಿದ್ದ ಆರ್.ಆರ್.ನಗರದ ಹೋಟೆಲ್, ಪಾರ್ಟಿ ಮಾಡಿದ್ದ ಸ್ಟೋನಿಬ್ರೂಕ್ ರೆಸ್ಟೋರೆಂಟ್, ಕಿಡ್ನಾಪ್ ಮಾಡಿದ್ದ ಚಿತ್ರದುರ್ಗದ ಸ್ಥಳ, ಮೈಸೂರಿನ ಖಾಸಗಿ ಹೋಟೆಲ್‌ಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಒಟ್ಟಾರೆ 139 ವಸ್ತುಗಳನ್ನು ಸೇರಿ ಮಹತ್ವದ ಟೆಕ್ನಿಕಲ್ ಸಾಕ್ಷಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಹಲ್ಲೆ ಕೃತ್ಯ ನಡೆಯಲು ಪ್ರಮುಖ ಪ್ರಚೋದನಾ ವ್ಯಕ್ತಿ ಹಾಗೂ ಕೇಂದ್ರ ಬಿಂದು ಆಗಿರುವಳು ಪವಿತ್ರಾ ಗೌಡ ಎಂಬುದು ಬಯಲಾಗಿದ್ದು, ರೇಣುಕಾ ಸ್ವಾಮಿ ಜೊತೆಗೆ ನಡೆಸಿದ ಚಾಟಿಂಗ್ ಸಾಕ್ಷಿಯನ್ನು ಕಲೆಹಾಕಲಾಗಿದೆ.
ವಿಡಿಯೋ ಮಾಡಿದ ಮೂವರು ಪೊಲೀಸ್ ವಶಕ್ಕೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka Swamy Murder) ಸಂಬಂಧಿಸಿದಂತೆ ಪೊಲೀಸರ ತನಿಖೆಯು ತೀವ್ರಗೊಳ್ಳುತ್ತಿದೆ. ಈ ನಡುವೆ ನಟ ದರ್ಶನ್ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಾಗ ಅದನ್ನೂ ವಿಡಿಯೋ ಮಾಡಿಕೊಂಡಿದ್ದ ಮೂವರು ಹುಡುಗರನ್ನು ವಶಕ್ಕೆ ಪಡೆಯಲಾಗಿದೆ.
ಹಲ್ಲೆ ವಿಡಿಯೋವನ್ನು ಬೇರೆ ಯಾರಿಗೋ ಫಾರ್ವರ್ಡ್ ಮಾಡಿದ್ದು, ಇದಾದ ನಂತರವೇ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮೂವರು ನಾಪತ್ತೆಯಾಗಿದ್ದರು. ಗುರುವಾರ ಮಧ್ಯಾಹ್ನ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ವಿಡಿಯೋ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮೊಬೈಲ್ ಪರಿಶೀಲನೆ ವೇಳೆ ವಿಡಿಯೋ ಡಿಲೀಟ್ ಮಾಡಿರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ವಿಡಿಯೋ ರಿಟ್ರೀವ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ವಿಡಿಯೊ ರಿಟ್ರೀವ್ ಆದರೆ ಕೇಸ್‌ಗೆ ಮತ್ತೊಂದು ಮಹತ್ವದ ಸಾಕ್ಷ್ಯ ಆಗಲಿದೆ.
ಇದನ್ನೂ ಓದಿ: Darshan Arrested: ದರ್ಶನ್ ಸೇರಿ ನಾಲ್ವರು ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಸೇರಿ 10 ಮಂದಿಗೆ ಜೈಲು