Site icon Vistara News

Actor Darshan: ಪವಿತ್ರಾ ಗೌಡ ಮತ್ತು ದರ್ಶನ್‌ ಸಂಬಂಧ ಅದಲ್ಲ: ಕಮಿಷನರ್‌ಗೆ ಪತ್ರ ಬರೆದ ವಿಜಯಲಕ್ಷ್ಮಿ

actor darshan vijayalakshmi pavitra gowda

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ನಟ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavitra Gowda) ಸಂಬಂಧದ ಕುರಿತು ಕಮಿಷನರ್‌ ಬಿ. ದಯಾನಂದ್‌ (Police commissioner B Dayanand) ಅವರು ನೀಡಿರುವ ಉಲ್ಲೇಖದ ಬಗ್ಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi) ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼಪವಿತ್ರ ಗೌಡ ಅವರು ದರ್ಶನ್‌ ಪತ್ನಿ ಅಲ್ಲ, ದರ್ಶನ್‌ ಪತ್ನಿ ನಾನುʼ ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನದ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.‌ದಯಾನಂದ್ ಸುದ್ದಿಗೋಷ್ಠಿ ಮಾಡಿದ್ದರು. ಆ ವೇಳೆ,‌‌ ʼದರ್ಶನ್ ಪತ್ನಿ ಪವಿತ್ರ ಗೌಡಗೆ ರೇಣುಕಾ ಸ್ವಾಮಿ ‌ಅಶ್ಲೀಲ‌ ಸಂದೇಶ ಕಳಿಸಿದ್ದʼ ಎಂದು ಉಲ್ಲೇಖ ಮಾಡಿದ್ದರು. ಆ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ, ‌ಪತ್ರಿಕೆಗಳಲ್ಲಿ‌ ಪ್ರಸಾರವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ‌ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

“ನೀವು ಸುದ್ದಿಗೋಷ್ಠಿಯಲ್ಲಿ ದರ್ಶನ್ ಪತ್ನಿ ಪವಿತ್ರ ಗೌಡ ಎಂದು ಹೇಳಿಕೆ‌ ನೀಡಿದ್ದೀರಿ. ದರ್ಶನ್‌ಗೆ ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ವಿವಾಹವು 19.05.2003ರಂದು ಧರ್ಮಸ್ಥಳದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವಿತ್ರ ಗೌಡ ನನ್ನ ಪತಿ ದರ್ಶನ್ ಸ್ನೇಹಿತೆ ನಿಜ. ಆದರೆ ಅವರು ದರ್ಶನ್ ಅವರ ಹೆಂಡತಿಯಲ್ಲ ಎಂದು ದಯವಿಟ್ಟು ಗಮನಿಸಿ” ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.

“ನೀವು ಹಾಗೂ ಗೃಹ ಸಚಿವರು ಇಬ್ಬರೂ A1 ಆರೋಪಿ ಪವಿತ್ರ ಗೌಡರನ್ನು ದರ್ಶನ್ ಪತ್ನಿ ಎಂದು ಹೇಳಿಕೆ‌ ನೀಡಿದ್ದೀರಿ. ಅದರಿಂದ ನನ್ನ ಹಾಗೂ ನನ್ನ ಮಗನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಪವಿತ್ರ ಗೌಡ ಸಂಜಯ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಒಬ್ಬ ಮಗಳು ಸಹ ಇದ್ದಾಳೆ. ಹೀಗಾಗಿ ಪೊಲೀಸ್ ರೆಕಾರ್ಡ್ಸ್ ಸರಿಪಡಿಸಿ” ಎಂದು ಮನವಿ ಮಾಡಿದ್ದಾರೆ.

ಜೈಲು ಸಹವಾಸಿಗಳನ್ನು ಮಾತನಾಡಿಸದ ದರ್ಶನ್‌

ಜೈಲುಪಾಲಾಗಿರುವ ನಟ ದರ್ಶನ್‌ (Actor Darshan), ಒಂದೇ ಸೆಲ್‌ನಲ್ಲಿರುವ ತನ್ನ ಶಿಷ್ಯ ವಿನಯ್‌ ಅನ್ನು ಕೂಡ ಹೆಚ್ಚು ಮಾತನಾಡಿಸುತ್ತಿಲ್ಲ, ಮೌನವಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಚೋದಿಸಿ ತನ್ನಿಂದ ಕೊಲೆ (Murder Case) ಮಾಡಿಸಿದರು ಎಂಬ ಸಿಟ್ಟೇ ಇದಕ್ಕೆ ಕಾರಣ ಎನ್ನಲಾಗಿದೆ.

ಸಹವಾಸ ಮಾಡಿ ಕೆಟ್ಟ ಮೇಲೆ ದರ್ಶನ್‌ಗೆ ಬುದ್ಧಿ ಬಂದಂತಿದೆ. ರೇಣುಕಾ ಸ್ವಾಮಿ ಮೆಸೇಜ್‌ಗಳಿಂದ ಆಕ್ರೋಶಗೊಂಡಿದ್ದ ದರ್ಶನ್‌ಗೆ ಇನ್ನಷ್ಟು ಪ್ರಚೋದನೆ ನೀಡಿದವರು ಜೊತೆಯಲ್ಲಿದ್ದ ವಿನಯ್ ಮತ್ತು ಟೀಂ. ಶೆಡ್‌ನಲ್ಲಿ ಹಲ್ಲೆ ನಡೆಸುತ್ತಿದ್ದಾಗ ʼಬಾಸ್, ಬಿಡ್ಬೇಡಿ ಬಿಡ್ಬೇಡಿʼ ಎಂದು ಗ್ಯಾಂಗ್‌ ಪ್ರಚೋದನೆ ಕೊಟ್ಟಿತ್ತು. ಇದರಿಂದಾಗಿಯೇ ಕೈಮೀರಿ ಕೊಲೆ ನಡೆಯಿತು ಎಂದು ದರ್ಶನ್‌ ಭಾವಿಸಿದಂತಿದೆ.

ತಾನು ಮಾಡಿದ್ದು ತಪ್ಪೋ, ಇವರ ಮಾತು ಕೇಳಿ ಕೆಟ್ಟೆನೋ ಎಂಬ ಚಿಂತೆಯಲ್ಲೇ ಇರುವ ದರ್ಶನ್, ಇದೇ ಕಾರಣಕ್ಕೆ ಜೊತೆಯಲ್ಲೇ ಒಂದೇ ಬ್ಯಾರಕ್‌ನಲ್ಲಿದ್ದರೂ ವಿನಯ್‌ ಅನ್ನು ಹೆಚ್ಚು ಮಾತನಾಡಿಸುತ್ತಿಲ್ಲ. ಜೊತೆಗಿರುವವರ ಸಹವಾಸ ಬಿಟ್ಟು ಹೆಚ್ಚು ಒಂಟಿಯಾಗಿದ್ದಾನೆ. ನಾನು ತಪ್ಪು ಮಾಡಿಬಿಟ್ನೋ ಅಥವಾ ಜೊತೆಯಲ್ಲಿದ್ದವರ ಮಾತು ಕೇಳಿ ಕೆಟ್ನೋ ಗೊತ್ತಿಲ್ಲ ಎಂದು ಸಿಬ್ಬಂದಿಗಳ ಬಳಿ ಆತ ಮಾತಾಡಿದ್ದು ವರದಿಯಾಗಿದೆ. ತಾಯಿ ಬಂದಾಗಲೂ, ಪತ್ನಿ ಬಂದಾಗಲೂ, ರಕ್ಷಿತಾ ಪ್ರೇಮ್ ಬಂದಾಗಲೂ ದರ್ಶನ್ ಇದೇ ಮಾತು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ, ದರ್ಶನ್‌ ಕುಟುಂಬಸ್ಥರಿಗೆ ಬಿಟ್ಟು ಉಳಿದವರ ಭೇಟಿಗೆ ಅವಕಾಶ ಕೊಡದಿರಲು ಜೈಲಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಪ್ರತಿನಿತ್ಯ ಜೈಲಿನ ಬಳಿ ವಿಐಪಿಗಳು ಬಂದರೆ ಮೈಂಟೇನ್ ಮಾಡುವುದು ಕಷ್ಟ. ಭೇಟಿಗೆ ದರ್ಶನ್ ಹೊರ ಬಂದು ವಿಸಿಟರ್ ಛೇಂಬರ್ ಬಳಿ ಬಂದರೆ ಉಳಿದ ಕೈದಿಗಳನ್ನು ಮೈಂಟೇನ್ ಮಾಡುವುದೂ ಕಷ್ಟವಾಗುತ್ತದೆ.

ಕೆಲ ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬಸ್ಥರು ಸಹ ಮುಗಿಬೀಳುತ್ತಾರೆ. ಕೈದಿಗಳು ಸಹ ದರ್ಶನ್ ಹೊರಬಂದಾಗ ಹಿಂದೆ ಓಡೋಡಿ ಬರುತ್ತಾರೆ. ಇದೆಲ್ಲದರಿಂದಾಗಿ ಜೈಲಿನೊಳಗೆ ಸುವ್ಯವಸ್ಥೆ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

Exit mobile version