ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ (Actor Darshan) ವಿಚಾರಣೆಯ ಜೊತೆಜೊತೆಗೇ, ಹಲ್ಲೆ ನಡೆಸಲಾಗಿರುವ ಪಟ್ಟಣಗೆರೆಯ ಶೆಡ್‌ನ (Pattanagere Shed) ಬಗ್ಗೆ ಇನ್ನಷ್ಟು ಭೀಕರ ಸತ್ಯಗಳು ಅನಾವರಣವಾಗುತ್ತಿವೆ. ಶೆಡ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧವಿಲ್ಲದ ಇನ್ನಷ್ಟು ಮಂದಿಯ ರಕ್ತದ ಕಲೆಗಳು (blood stains) ಪತ್ತೆಯಾಗಿದ್ದು, ಇನ್ನಷ್ಟು ಹಲ್ಲೆ- ಕೊಲೆ (Assault) ಪ್ರಕರಣಗಳು ಇಲ್ಲಿ ನಡೆದಿರಬಹುದು ಎಂಬ ತರ್ಕಕ್ಕೆ ಪುಷ್ಟಿ ನೀಡಿವೆ.
ದರ್ಶನ್ ಮತ್ತು ಗ್ಯಾಂಗ್‌ನ ಕರಾಳ ಹಿನ್ನೆಲೆಗೆ ಈ ಶೆಡ್‌ನಲ್ಲಿ ಸಿಗುತ್ತಿರುವ ಸಾಕ್ಷ್ಯಗಳು ಮತ್ತಷ್ಟು ಪೂರಕವಾಗಲಿವೆ. ಪಟ್ಟಣಗೆರೆ ಶೆಡ್‌ನಲ್ಲಿ ವಿಧಿವಿಜ್ಞಾನ ಪರಿಶೀಲನೆಗೆ ಎಫ್ಎಸ್ಎಲ್ ಟೀಮ್ ಹೋದಾಗ ಬೇರೆಯವರ ರಕ್ತದ ಕಲೆಗಳು ಸಿಕ್ಕಿದ್ದು, ಇವು ಯಾರವು ಎಂದು ಪತ್ತೆ ಹಚ್ಚುವ ತಲೆನೋವು ಕೂಡ ಎಸ್‌ಐಟಿ ಹೆಗಲೇರಿದೆ.
ಈ ಹಿಂದೆ ಇದೇ ಶೆಡ್‌ನಲ್ಲಿ ದರ್ಶನ್, ತನ್ನ ಇತರ ವಿರೋಧಿಗಳನ್ನೂ ಕರೆಸಿ ಹಲ್ಲೆ ನಡೆಸುತ್ತಿದ್ದುದರ ಬಗ್ಗೆ ಪುಕಾರುಗಳಿವೆ. ಬಂಧಿತ ಆರೋಪಿಗಳಲ್ಲೇ ಹಲವರು ಈ ವಿಚಾರ ಬಾಯ್ಬಿಟ್ಟಿದ್ದಾರೆ. ಹೀಗಾಗಿ, ವಿನಯ್ ಆಂಡ್ ಗ್ಯಾಂಗ್‌ನಿಂದ ಈ ಶೆಡ್‌ನಲ್ಲಿ ರೇಣುಕಾಸ್ವಾಮಿ ಅಲ್ಲದೆ ಬೇರೆಯವರ ಮೇಲೆಯೂ ಹಲ್ಲೆ ನಡೆದಿತ್ತು; ವ್ಯವಹಾರದ ವಿಚಾರವಾಗಿ ಹಲವರ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆಯೂ ಇದೀಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈಗ ರೇಣುಕಾಸ್ವಾಮಿಯ ರಕ್ತದ ಕಲೆಗಳಲ್ಲದೆ, ಮೂರರಿಂದ ನಾಲ್ಕು ತಿಂಗಳ ಹಿಂದಿನ ಬ್ಲಡ್ ಗುರುತುಗಳು ಕೂಡ ಪತ್ತೆಯಾಗಿವೆ. ಆದರೆ ಹಲ್ಲೆಗೊಳಗಾದ ಬಗ್ಗೆ ಯಾರೂ ಸಹ ದೂರು ನೀಡಲು ಮುಂದೆ ಬಂದಿಲ್ಲ. ಹಲ್ಲೆಗೊಳಗಾಗಿದ್ದರೂ ದರ್ಶನ್‌ಗೆ ಹೆದರಿಕೊಂಡು ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ನಿರ್ಮಾಪಕರಿಗೂ ಗೂಸಾ!
ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆಯ ಆ ಶೆಡ್ ಬಗ್ಗೆ ಇದೀಗ ಇನ್ನಿತರ ಕೆಲವು ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಇಲ್ಲಿ ಅದೆಷ್ಟೋ ಕನ್ನಡ ಚಿತ್ರ ನಿರ್ಮಾಪಕರು ಕೂಡ ಗೂಸಾ ತಿಂದಿದ್ದಾರೆ ಎಂಬುದು ಬಯಲಾಗಿದೆ. ತನಗೆ ಆಗದವರು, ತನ್ನ ವಿರೋಧಿಗಳು ಹಾಗೂ ಪೇಮೆಂಟ್ ಮಾಡದ ನಿರ್ಮಾಪಕರನ್ನು ಅಟ್ಯಾಕ್ ಮಾಡಲು ದರ್ಶನ್ ಬಳಸುತ್ತಿದ್ದ ಜಾಗವೇ ಈ ಶೆಡ್ ಎನ್ನಲಾಗಿದೆ.
ನಟ ದರ್ಶನ್ ಎಷ್ಟೋ ಮಂದಿಗೆ ಇಲ್ಲೇ ಹಲ್ಲೆ ಮಾಡಿ, 2ರಿಂದ 3 ದಿನಗಳ ಕಾಲ ಇಲ್ಲೇ ಇರಿಸಿಕೊಳ್ಳುತ್ತಿದ್ದ. ಕಳಿಸಿಕೊಡುವಾಗ ಬ್ಯಾಂಡೇಜ್ ಹಾಕಿಸಿ ಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ ಎಂದು ಕೆಲವರು ಇದೀಗ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ದರ್ಶನ್ ಕಾರು ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದುದನ್ನು ಕೆಲವು ಸ್ಥಳೀಯರು ಗಮನಿಸಿದ್ದಾರೆ. ದರ್ಶನ್‌ಗೆ ಇನ್ನೆಷ್ಟು ಕರಾಳ ಮುಖಗಳಿವೆ ಎಂದು ಪೊಲೀಸರೇ ಇದೀಗ ಬೆಚ್ಚಿ ಬೀಳುವಂತಾಗಿದೆ.
ಪ್ರಮುಖ ಸಾಕ್ಷಿಗಳೇ ನಾಶ, ಸಿಸಿಟಿವಿ ರೆಕಾರ್ಡ್ ಡಿಲೀಟ್
ರೇಣುಕಾಸ್ವಾಮಿ ಕೊಲೆಯ (Renuka Swamy Murder) ನಂತರ ಆಸುಪಾಸಿನ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ (CCTV recording) ದಾಖಲಾಗಿದ್ದ ಎಲ್ಲ ದೃಶ್ಯಗಳನ್ನು ಡಿಲೀಟ್ (Delete) ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ದರ್ಶನ್ (Actor Darshan) ನಡೆಸಿದ ಕರಾಳ ಕೃತ್ಯದ ನಂತರ ಕಳೆದ ಒಂದು ವರ್ಷದ ಸಿಸಿಟಿವಿ ದಾಖಲಾತಿಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿ ವಿಸ್ತಾರ ನ್ಯೂಸ್‌ಗೆ ದೊರೆತಿದೆ.
ಕೊಲೆಯ ಬಳಿಕ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಹಾಗೂ ಹಲ್ಲೆ ನಡೆದ ಪಟ್ಟಣಗೆರೆಯ ಶೆಡ್‌ನ ದೃಶ್ಯಗಳನ್ನು ಡಿಲೀಟ್ ಮಾಡಿಸಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದ ಸಿಸಿ ಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳೇ ಕೊಲೆಯ ಪ್ರಮುಖ ಸಾಕ್ಷಿ ಆಗಲಿವೆ ಎಂಬ ಹಿನ್ನೆಲೆಯಲ್ಲಿ, ಇವುಗಳನ್ನು ಪೂರ್ತಿಯಾಗಿ ಡಿಲೀಟ್ ಮಾಡಲು ಆರೋಪಿಗಳು ಅಪರಾಧ ಪರಿಣಿತರ ಸಲಹೆ ಪಡೆದೇ ಈ ಕೃತ್ಯ ಎಸಗಿದ್ದಾರೆ ಎಂದು ತರ್ಕಿಸಲಾಗಿದೆ.
ರೇಣುಕಾಸ್ವಾಮಿ ಕೊಲೆಯ ಮೊದಲಿನ ಹಾಗೂ ನಂತರದ ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ತನಿಖೆಗೆ ಇವು ಅತ್ಯಂತ ಅಗತ್ಯವಾಗಿದ್ದು, ಶೆಡ್ ಹಾಗೂ ರೆಸ್ಟೋರೆಂಟ್‌ನ ಸಿಸಿ ಟಿವಿ ರೆಕಾರ್ಡಿಂಗ್ ರಿಕವರಿ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದರ್ಶನ್ ಸೇರಿದಂತೆ ಆರೋಪಿಗಳ ಬಂಧನ ಆದ ಬಳಿಕ ಈ ರೆಕಾರ್ಡಿಂಗ್ ಡಿಲೀಟ್ ಮಾಡಲಾಗಿದೆಯೇ ಅಥವಾ ಮೊದಲೇ ಮಾಡಲಾಗಿದೆಯೇ ಎಂದು ತಿಳಿದುಬರಬೇಕಿದೆ.
ಕೊಲೆಯ ಪ್ರಮುಖ ಸಾಕ್ಷಿಗಳನ್ನೇ ಖತರ್‌ನಾಕ್ ಆರೋಪಿಗಳು ಡಿಲೀಟ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಾಕ್ಷಿ ನಾಶಕ್ಕೆ ಪೊಲೀಸ್ ಇಲಾಖೆಯಲ್ಲಿರುವವರಿಂದಲೂ ಆರೋಪಿಗಳು ಸಲಹೆ ಪಡೆದಿದ್ದಾರೆಯೇ ಎಂಬುದು ಕೂಡ ತನಿಖಾಧಿಕಾರಿಗಳಿಗೆ ಕುತೂಹಲ ಮೂಡಿಸಿದೆ. ಈಗಾಗಲೇ ಪ್ರಶ್ನೆಗೆ ಒಳಗಾಗುತ್ತಿರುವವರ ಪಟ್ಟಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಇದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿ ಥಳಿಸಿ ಸಾಯಿಸಲಾಗಿತ್ತು. ನಂತರ ಇದನ್ನು ಮುಚ್ಚಿಹಾಕುವುದು ಹೇಗೆ ಎಂಬ ಕುರಿತು ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ಹಾಗೂ ಆರೋಪಿಗಳು ಕೂತು ಮಾತನಾಡಿದ್ದರು. ಇಲ್ಲೇ 30 ಲಕ್ಷ ರೂಪಾಯಿಯ ಡೀಲ್ ಕೂಡ ನಡೆದಿತ್ತು. ಇದೀಗ ಎರಡೂ ಕಡೆಗಳ ಸಿಸಿಟಿವಿ ಹಾರ್ಡ್ ಡ್ರೈವ್‌ಗಳು ಕೂಡ ನಾಶವಾಗಿವೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲಿಕ ವಿನಯ್‌ನನ್ನು ಕೂಡ ಪ್ರಶ್ನಿಸಲಾಗುತ್ತಿದೆ.
ಇದನ್ನೂ ಓದಿ: Actor Darshan: ಕೊಲೆಯನ್ನು ಆತುರದಲ್ಲಿ ಮಾಡಿರ್ತಾನೆ ಬಳಿಕ ಕೊರಗುತ್ತಾನೆ; ದರ್ಶನ್ ಹಳೆಯ ಸಂದರ್ಶನ ವೈರಲ್!