ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲುಪಾಲಾಗಿರುವ ನಟ ದರ್ಶನ್ (Actor Darshan), ಒಂದೇ ಸೆಲ್‌ನಲ್ಲಿರುವ ತನ್ನ ಶಿಷ್ಯ ವಿನಯ್ ಅನ್ನು ಕೂಡ ಹೆಚ್ಚು ಮಾತನಾಡಿಸುತ್ತಿಲ್ಲ, ಮೌನವಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಚೋದಿಸಿ ತನ್ನಿಂದ ಕೊಲೆ (Murder Case) ಮಾಡಿಸಿದರು ಎಂಬ ಸಿಟ್ಟೇ ಇದಕ್ಕೆ ಕಾರಣ ಎನ್ನಲಾಗಿದೆ.
ಸಹವಾಸ ಮಾಡಿ ಕೆಟ್ಟ ಮೇಲೆ ದರ್ಶನ್‌ಗೆ ಬುದ್ಧಿ ಬಂದಂತಿದೆ. ರೇಣುಕಾ ಸ್ವಾಮಿ ಮೆಸೇಜ್‌ಗಳಿಂದ ಆಕ್ರೋಶಗೊಂಡಿದ್ದ ದರ್ಶನ್‌ಗೆ ಇನ್ನಷ್ಟು ಪ್ರಚೋದನೆ ನೀಡಿದವರು ಜೊತೆಯಲ್ಲಿದ್ದ ವಿನಯ್ ಮತ್ತು ಟೀಂ. ಶೆಡ್‌ನಲ್ಲಿ ಹಲ್ಲೆ ನಡೆಸುತ್ತಿದ್ದಾಗ ʼಬಾಸ್, ಬಿಡ್ಬೇಡಿ ಬಿಡ್ಬೇಡಿʼ ಎಂದು ಗ್ಯಾಂಗ್ ಪ್ರಚೋದನೆ ಕೊಟ್ಟಿತ್ತು. ಇದರಿಂದಾಗಿಯೇ ಕೈಮೀರಿ ಕೊಲೆ ನಡೆಯಿತು ಎಂದು ದರ್ಶನ್ ಭಾವಿಸಿದಂತಿದೆ.
ತಾನು ಮಾಡಿದ್ದು ತಪ್ಪೋ, ಇವರ ಮಾತು ಕೇಳಿ ಕೆಟ್ಟೆನೋ ಎಂಬ ಚಿಂತೆಯಲ್ಲೇ ಇರುವ ದರ್ಶನ್, ಇದೇ ಕಾರಣಕ್ಕೆ ಜೊತೆಯಲ್ಲೇ ಒಂದೇ ಬ್ಯಾರಕ್‌ನಲ್ಲಿದ್ದರೂ ವಿನಯ್ ಅನ್ನು ಹೆಚ್ಚು ಮಾತನಾಡಿಸುತ್ತಿಲ್ಲ. ಜೊತೆಗಿರುವವರ ಸಹವಾಸ ಬಿಟ್ಟು ಹೆಚ್ಚು ಒಂಟಿಯಾಗಿದ್ದಾನೆ.
ನಾನು ತಪ್ಪು ಮಾಡಿಬಿಟ್ನೋ ಅಥವಾ ಜೊತೆಯಲ್ಲಿದ್ದವರ ಮಾತು ಕೇಳಿ ಕೆಟ್ನೋ ಗೊತ್ತಿಲ್ಲ ಎಂದು ಸಿಬ್ಬಂದಿಗಳ ಬಳಿ ಆತ ಮಾತಾಡಿದ್ದು ವರದಿಯಾಗಿದೆ. ತಾಯಿ ಬಂದಾಗಲೂ, ಪತ್ನಿ ಬಂದಾಗಲೂ, ರಕ್ಷಿತಾ ಪ್ರೇಮ್ ಬಂದಾಗಲೂ ದರ್ಶನ್ ಇದೇ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಈ ನಡುವೆ, ದರ್ಶನ್ ಕುಟುಂಬಸ್ಥರಿಗೆ ಬಿಟ್ಟು ಉಳಿದವರ ಭೇಟಿಗೆ ಅವಕಾಶ ಕೊಡದಿರಲು ಜೈಲಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಪ್ರತಿನಿತ್ಯ ಜೈಲಿನ ಬಳಿ ವಿಐಪಿಗಳು ಬಂದರೆ ಮೈಂಟೇನ್ ಮಾಡುವುದು ಕಷ್ಟ. ಭೇಟಿಗೆ ದರ್ಶನ್ ಹೊರ ಬಂದು ವಿಸಿಟರ್ ಛೇಂಬರ್ ಬಳಿ ಬಂದರೆ ಉಳಿದ ಕೈದಿಗಳನ್ನು ಮೈಂಟೇನ್ ಮಾಡುವುದೂ ಕಷ್ಟವಾಗುತ್ತದೆ.
ಕೆಲ ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬಸ್ಥರು ಸಹ ಮುಗಿಬೀಳುತ್ತಾರೆ. ಕೈದಿಗಳು ಸಹ ದರ್ಶನ್ ಹೊರಬಂದಾಗ ಹಿಂದೆ ಓಡೋಡಿ ಬರುತ್ತಾರೆ. ಇದೆಲ್ಲದರಿಂದಾಗಿ ಜೈಲಿನೊಳಗೆ ಸುವ್ಯವಸ್ಥೆ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ
ಜೈಲಿನಲ್ಲಿರುವ ನಟ ದರ್ಶನ್‌ನನ್ನು ಪವಿತ್ರಾ ಗೌಡ ಆಪ್ತ ಸ್ನೇಹಿತೆ ಮಂಗಳವಾರ ಭೇಟಿ ಮಾಡಿದ್ದಾರೆ. ಒಂದು ಕಡೆ ಪವಿತ್ರಾ ಸ್ನೇಹಿತೆ 15 ನಿಮಿಷ ದರ್ಶನ್ ಜತೆ ಮಾತುಕತೆ ನಡೆಸಿದ್ದರೆ, ಮತ್ತೊಂದೆಡೆ ದರ್ಶನ್‌ರನ್ನು (Actor Darshan) ಭೇಟಿಯಾಗಲು ನಟ ಧನ್ವೀರ್‌ಗೆ ಅವಕಾಶ ಸಿಗದಿರುವುದು ಕಂಡುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ಅಭಿಪ್ರಾಯ ತಿಳಿಯಲು ಪವಿತ್ರಾ ಗೌಡ ಯತ್ನಿಸಿದ್ದಾರೆ. ಹೀಗಾಗಿ ಅವರು ನೀಡಿದ ಮಾಹಿತಿಯನ್ನು ದರ್ಶನ್‌ಗೆ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ ರವಾನಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಬೇರೆ ಬೇರೆಯಾಗಿದ್ದರೂ ದರ್ಶನ್ ಮತ್ತು ಪವಿತ್ರಾಗೆ ಪರಸ್ಪರ ಮಾಹಿತಿ ಸಿಗುತ್ತಿದೆ. ಇದಕ್ಕೆ ಪವಿತ್ರಾ ಸ್ನೇಹಿತೆ ಸಮತಾ ಮಧ್ಯವರ್ತಿಯಾಗಿದ್ದಾರೆ. ನಟ ದರ್ಶನ್ ತನ್ನ ಬಗ್ಗೆ ಏನು ಹೇಳುತ್ತಿದ್ದಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅವರ ಅಭಿಪ್ರಾಯ ತಿಳಿಯಲು ಪವಿತ್ರಾ ಪ್ರಯತ್ನಿಸಿದ್ದಾರೆ. ಹೀಗಾಗಿ ಸ್ನೇಹಿತೆ ಮೂಲಕ ದರ್ಶನ್‌ರನ್ನು ಭೇಟಿ ಮಾಡಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಕೂಡ ಸಮತಾ ಭೇಟಿಗೆ ಓಕೆ ಅಂದಿದ್ದರು. ಹೀಗಾಗಿ ಅವರನ್ನು ಜೈಲಿನೊಳಗೆ ಕಳುಹಿಸಲಾಗಿದೆ.
ಇದನ್ನೂ ಓದಿ: Actor Darshan: ದರ್ಶನ್ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!