ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಹತ್ಯೆ (Renuka Swamy Murdr) ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ (Actor Darshan) ಸೇರಿ 17 ಆರೋಪಿಗಳಿಂದ, ಎರಡು ಮೊಬೈಲ್‌ಗಳು ಇನ್ನೂ ಸೀಜ್ ಆಗಬೇಕಿದೆ. ಆದರೆ ಆರೋಪಿಗಳು ನೀಡಿದ ಮಾಹಿತಿಯಂತೆ ಅವರು ಇವುಗಳನ್ನು ರಾಜಕಾಲುವೆಯಲ್ಲಿ ಎಸೆದಿದ್ದು, ಇವುಗಳಿಗಾಗಿ ಎಷ್ಟೇ ಹುಡುಕಾಡಿದರೂ ಸಿಕ್ಕಿಲ್ಲ. ರೇಣುಕಾ ಸ್ವಾಮಿ ಮೊಬೈಲ್ ಕೇಸಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನು ಹೊಂದಿದ್ದು, ಇವುಗಳನ್ನು ಪಡೆಯಲು ಪೊಲೀಸರು ಮತ್ತೊಂದು ದಾರಿ ಹಿಡಿದಿದ್ದಾರೆ.
ಬೆಂಗಳೂರು ಪೊಲೀಸರು, ಹೊಸ ಆಯಾಮದಲ್ಲಿ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಮೃತ ರೇಣುಕ ಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು, ಮೊಬೈಲ್ ಮಾಹಿತಿ ರೀ ಆಕ್ಸೆಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕ ಸ್ವಾಮಿ ಮೊಬೈಲ್ ಫೋನ್ ಅನ್ನು ಆರೋಪಿಗಳು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸುಮ್ಮನಹಳ್ಳಿ ಜಂಕ್ಷನ್ ಸಮೀಪವಿರುವ ರಾಜಕಾಲುವೆಗೆ ಎಸೆದಿದ್ದರು. ಹೀಗಾಗಿ ಅದರಲ್ಲಿದ್ದ ಡಾಟಾ ನಿಷ್ಕ್ರಿಯವಾಗಿತ್ತು. ಆದ್ದರಿಂದ ಕೋರ್ಟ್ ಅನುಮತಿ ಪಡೆದು ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು, ರಿ-ಆಕ್ಸೆಸ್ ಮಾಡಿ ಅದರಲ್ಲಿರುವ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ವೇಳೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಅನ್‌ಸೀಲ್ ಮಾಡಿ, ಯಾರಿಗೆಲ್ಲಾ ಕರೆ ಮಾಡಲಾಗಿತ್ತು ಎಂದು ಪರಿಶೀಲಿಸುತ್ತಿದ್ದಾರೆ.
ಭದ್ರತಾ ದೃಷ್ಟಿಯಿಂದಾಗಿ ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಸೆಕ್ಯೂರಿಟಿ ರೂಂ. ನಂ. 3ರಲ್ಲಿ ದರ್ಶನ್ ಹಾಗೂ ಮತ್ತೊಬ್ಬ ಆರೋಪಿ ವಿನಯ್ ಸಹಖೈದಿಗಳಾಗಿ ಜೈಲುವಾಸ
ಅನುಭವಿಸುತ್ತಿದ್ದಾರೆ. ಶನಿವಾರ ರಾತ್ರಿ ದರ್ಶನ್‌ಗೆ ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬಾರ್, ಮಜ್ಜಿಗೆ ನೀಡಲಾಗಿದೆ. ದಿನದ ಮೂರು ಹೊತ್ತು ಮಾಂಸಾಹಾರ ಸೇವನೆ ಮಾಡುತ್ತಿದ್ದ ದರ್ಶನ್‌ಗೆ ಇದೀಗ ಜೈಲೂಟ ಸರಿಯಾಗಿ ಸೇರುತ್ತಿಲ್ಲ. ಹೀಗಾಗಿ ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ದರ್ಶನ್, ಜೈಲು ಸಿಬ್ಬಂದಿ ಕೊಟ್ಟ ಅನ್ನ ಬೇಡ ಎಂದಿದ್ದರು ಎನ್ನಲಾಗಿದೆ.
ಕೊಲೆ ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ಇರಿಸಿದರೆ ಸಾಕ್ಷಿ ನಾಶಕ್ಕೆ ಸಂಚು ರೂಪಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿ ನಾಲ್ಕು ಕೈದಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಸೂಚನೆ ನೀಡಿದೆ.
ಇದನ್ನೂ ಓದಿ: Renuka Swamy Murder: ರೇಣುಕಾ ಸ್ವಾಮಿ ಮನೆಗೆ ಗೃಹ ಸಚಿವ ಪರಮೇಶ್ವರ್, ಪ್ರತಿಪಕ್ಷ ನಾಯಕ ವಿಜಯೇಂದ್ರ ಭೇಟಿ