ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ನಟ ದರ್ಶನ್ (Actor Darshan) ಜೊತೆಗೆ ಬಂಧಿತರಾಗಿ ನಂತರ ತುಮಕೂರು ಜೈಲಿನಲ್ಲಿ (Tumkur news) ಒಂದೇ ಸೆಲ್‌ನಲ್ಲಿರುವ ಆರೋಪಿಗಳ ನಡುವೆ ಪರಸ್ಪರ ಮಾತಿನ ಚಕಮಕಿ, ಬೈಗುಳ ವಿನಿಮಯ ಹಾಗೂ ಹೊಯ್‌ಕೈ ನಡೆದಿರುವುದು ವರದಿಯಾಗಿದೆ.
ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳಲ್ಲಿ ಒಬ್ಬೊಬ್ಬನ ಕತೆಯೂ ಒಂದೊಂದು ಬಗೆಯಾಗಿದ್ದು, ತನ್ನ ಸ್ಥಿತಿಯಿಂದಾಗಿ ಹತಾಶರಾಗಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿ ಪವಿತ್ರ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಯಾರಿಗೂ ಜಾಮೀನು ದೊರೆತಿಲ್ಲ. ಹೀಗಾಗಿ ಇನ್ನುಳಿದವರಿಗೂ ಜಾಮೀನು ಸಿಗುವ ಸಾಧ್ಯತೆ ಕ್ಷೀಣವಾಗಿದೆ.
ಸದ್ಯ ಸುರಕ್ಷತೆಯ ಕಾರಣದ ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಿರುವ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿಗಳಾದ ರವಿಶಂಕರ್, ನಿಖಿಲ್, ಕಾರ್ತಿಕ್, ಕೇಶವ ಎಲ್ಲರೂ ಒಂದೇ ಬ್ಯಾರಕ್‌ನಲ್ಲಿದ್ದಾರೆ. ಪ್ರಕರಣದ ಹೊಣೆ ನಿನ್ನದು ನಿನ್ನದು ಎಂದು ನಾಲ್ವರೂ ಬೈದಾಡಿಕೊಂಡಿದ್ದಾರೆ.
ನಿನ್ನ ಮಾತು ಕೇಳಿ ನಾನೂ ಸಿಕ್ಹಾಕಿಕೊಂಡೆ ಅಂತ ಪರಸ್ಪರ ನಿಂದಿಸಿಕೊಂಡಿದ್ದಾರೆ. ರಾಘವೇಂದ್ರನ ಮಾತು ಕೇಳಿ ನಾವು ಸಿಲುಕಿಕೊಂಡೆವು. ನಮಗೆ ಜೈಲೇ ಗಟ್ಟಿಯಾಗುತ್ತೆ. ಯಾರೂ ಸಹಾಯ ಮಾಡುವುದಿಲ್ಲ ಎಂದು ಗೋಳಾಡಿಕೊಂಡಿದ್ದಾರೆ. ದರ್ಶನ್‌ಗೆ ಜಾಮೀನು ಅರ್ಜಿಯನ್ನಾದರೂ ಸಲ್ಲಿಸಲಾಗಿತ್ತು. ಆದರೆ ಇವರಿಗೆ ಜಾಮೀನು ನೀಡುವುದಕ್ಕೂ ಯಾರೂ ಮುಂದೆ ಬಂದಿಲ್ಲ. ದರ್ಶನ್ ಮನೆಯವರು ಹಾಗೂ ನ್ಯಾಯವಾದಿಗಳ ತಂಡದ ಕಡೆಯಿಂದಲೂ ಸಹಾಯದ ಭರವಸೆ ದೊರೆತಿಲ್ಲ ಎನ್ನಲಾಗಿದೆ.
ಈ ಪ್ರಕರಣದ ಬಳಿಕ ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದು ಇನ್ನೊಬ್ಬ ಆರೋಪಿ ರಾಘವೇಂದ್ರ ಹಣದ ಆಮಿಷ ತೋರಿಸಿದ್ದನಂತೆ. ಕೊಲೆ ಬಳಿಕ ಮೃತದೇಹ ಬಿಸಾಡಿದ್ದು, ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗಿದ್ದು ಎಲ್ಲವನ್ನೂ ಈ ಆರೋಪಿಗಳು ರಾಘವೇಂದ್ರ ಹೇಳಿದಂತೆ ಮಾಡಿದ್ದಾರೆ. ಆದರೆ ಪೊಲೀಸರ ತನಿಖೆಯ ಬಿಗಿ ಹೆಚ್ಚಾಗುತ್ತ ಹೋದಂತೆ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ.
ದುಡ್ಡಿನ ಆಸೆಗೆ ತಪ್ಪು ಮಾಡಿಬಿಟ್ಟೆವು ಎಂದು ಇದೀಗ ಜೈಲು ಸಿಬ್ಬಂದಿ ಬಳಿ ಆರೋಪಿಗಳು ಅಳಲು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಜೋರು ಮಾತುಗಳಿಂದ ನಾಲ್ವರೂ ಬೈದಾಡಿಕೊಂಡಿದ್ದು, ಜೈಲಾಧಿಕಾರಿಗಳು ನಾಲ್ವರಿಗೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಗಲಾಟೆ ಮಾಡಿಕೊಂಡರೆ ಕಷ್ಟ ಎಂದು ಜೈಲು ಸಿಬ್ಬಂದಿ ಹೆಚ್ಚಿನ ನಿಗಾ ಇಟ್ಟಿದ್ದಾರೆ.
ಸಾಕ್ಷಿಗಳಿಗೆ ಬೆದರಿಕೆ, ಎನ್‌ಸಿಆರ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಜೈಲಿನಲ್ಲಿದ್ದೇ ಡಿ ಗ್ಯಾಂಗ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದ್ದು, ಪೊಲೀಸರ ಮುಂದೆ ಸಾಕ್ಷಿ ಹೇಳದಂತೆ ಹಲವರಿಗೆ ಬೆದರಿಕೆ ಒಡ್ಡಿದೆ ಎಂದು ಗೊತ್ತಾಗಿದೆ. ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿಗೆ ಜೈಲಿನಲ್ಲಿದ್ದುಕೊಂಡೇ ಈ ಟೀಮ್ ಬೆದರಿಕೆ ಹಾಕುತ್ತಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲು ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವ ಮಾಹಿತಿಯೂ ಹೇಳದಂತೆ ಬೆದರಿಕೆ ಹಾಕಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಎನ್‌ಸಿಆರ್ ದಾಖಲಿಸಿ ಸಾಕ್ಷಿಗಳಿಗೆ ಧೈರ್ಯ ತುಂಬಿದ್ದಾರೆ. ಈಗಾಗಲೇ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ಬಂಧನಕ್ಕೂ ಮುನ್ನವೇ ಗ್ಯಾಂಗ್ ಡಿಲೀಟ್ ಮಾಡಿಸಿತ್ತು. ಸಾಕ್ಷ್ಯನಾಶ ಮಾಡಲು ಡಿ ಗ್ಯಾಂಗ್ ಸರ್ವ ಪ್ಲಾನ್‌ಗಳನ್ನೂ ಮಾಡಿತ್ತು. ಸಾಕ್ಷಿಗಳು ಈ ಕುರಿತು ಆತಂಕದಲ್ಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: Actor Darshan: ದರ್ಶನ್ & ಗ್ಯಾಂಗ್ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ!