Site icon Vistara News

Actor Darshan: ಊಟವಿಲ್ಲ, ನಿದ್ರೆಯಿಲ್ಲ, ಕಡಿಮೆಯಾಯ್ತು ಡಿ ಬಾಸ್‌ ತೂಕ!

Actor Darshan Judicial Custody Jailer Gave UTP Number

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಊಟ ತಿಂಡಿ ಸೇರದೆ, ನಿದ್ರೆ ಬರದೆ ಚಡಪಡಿಸುತ್ತಿದ್ದು, ಒಂದು ವಾರದಲ್ಲಿ ಕಿಲೋಗಳಷ್ಟು ತೂಕ ಕಳೆದುಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಜೈಲೂಟ ಒಗ್ಗದೆ, ಸರಿಯಾದ ನಿದ್ದೆ ಇಲ್ಲದಿರುವ ಕಾರಣ ದರ್ಶನ್ ತೂಕ ಕಳೆದುಕೊಳ್ಳುತ್ತಿದ್ದು, ನಟನಿಗಾಗಿ ಜೈಲಿನ ಮೆನುವಿನಿಂದ ಆಚೆಗಿನ ಯಾವುದೇ ವಿಶೇಷ ಆಹಾರ ನೀಡಲಾಗಿಲ್ಲ. ಹೀಗಾಗಿ ನಿನ್ನೆ ರಾತ್ರಿಯೂ ಜೈಲಿನಲ್ಲಿ ನೀಡಿದ್ದ ಊಟವನ್ನು ಮಾಡಿದ್ದ ದರ್ಶನ್, ರಾತ್ರಿ 12 ಗಂಟೆಯವರೆಗೂ ನಿದ್ರೆ ಮಾಡಿರಲಿಲ್ಲ. ಬೆಳಿಗ್ಗೆ 5 ಗಂಟೆಗೆ ನಿದ್ರೆಯಿಂದ ಎಚ್ಚರಗೊಂಡಿದ್ದ.

ಮಾನಸಿಕವಾಗಿ ಕುಗ್ಗಿ ಮಂಕಾದಂತಿರುವ ಡಿ ಬಾಸ್‌, ಜೈಲ್ ಸಿಬ್ಬಂದಿ ನೀಡಿದ ಕಾಫಿ ಸೇವಿಸಿದ್ದಾನೆ. ಜೈಲಿನ ಮೆನುವಿನಂತೆ ಸಿಬ್ಬಂದಿ ಪುಳಿಯೋಗರೆ ತಿಂಡಿ ನೀಡಿದ್ದಾರೆ. ಜೈಲೂಟ ಒಗ್ಗದೆ ಇದ್ದರೂ ವಿಧಿ ಇಲ್ಲದೆ ಸೇವಿಸಬೇಕಾದ ಪರಿಸ್ಥಿತಿ ಅವರಿಗಿದೆ. ಕಳೆದೆರಡು ದಿನಗಳ ಹಿಂದೆ ಮಡದಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ ನಟನನ್ನು ನೋಡಲು ಬಂದಿದ್ದರು. ಆಗಲೂ ಯಾವುದೇ ಆಹಾರ ತರಲು ಅವಕಾಶ ನೀಡಿರಲಿಲ್ಲ.

ಮಡದಿ ಹಾಗೂ ಮಗ ಬಂದು ಹೋದ ಬಳಿಕ‌ ಕೊಂಚ ನಿರಾಳರಾಗಿದ್ದ ದರ್ಶನ್, ಮತ್ತೆ ಒಂದು ದಿನದ ಬಳಿಕ ಮಂಕಾದಂತೆ ಜೈಲಿನ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾನೆ. ಸಹಬಂಧಿಗಳ ಜೊತೆಗೂ ತುಟಿ ಬಿಚ್ಚದೆ ʼದಾಸʼ ಮೌನದಿಂದಲೇ ಕುಳಿತಿದ್ದಾನೆ. ಈ ಪ್ರಕರಣದ ಇನ್ನೂ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

ಇಂದು ದರ್ಶನ್ ತಾಯಿ ಹಾಗೂ ಸಹೋದರ ದಿನಕರ್ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಆದರೆ ಇವರೊಂದಿಗೆ ದರ್ಶನ್‌ ಬಹುಕಾಲದಿಂದ ಅಂತರ ಕಾಯ್ದುಕೊಂಡಿದ್ದಾನೆ. ದರ್ಶನ್‌ ದುಂಡಾವರ್ತನೆಗಳು ಆರಂಭವಾದ ಬಳಿಕ ಆತನಿಗೆ ಬುದ್ಧಿ ಹೇಳುತ್ತಿದ್ದ ತಾಯಿ ಹಾಗೂ ಸಹೋದರ, ನಂತರ ಈತನಿಂದಲೇ ಧಮಕಿಗೆ ಹಾಗೂ ಹಲ್ಲೆಗೆ ಒಳಗಾದ ಬಳಿಕ ಈತನ ಸಹವಾಸವನ್ನೇ ಬಿಟ್ಟಿದ್ದರು.

ಬೆಂಗಳೂರಿನಿಂದ ತುಮಕೂರು ಜೈಲು ಸೇರಿದ ನಾಲ್ವರು ಆರೋಪಿಗಳು

ನಟ ದರ್ಶನ್ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರಿನ ಜೈಲಿಗೆ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆ‌ಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿದೆ.‌

ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವ್, ನಿಖಿಲ್ ತುಮಕೂರು ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರಿನ ಊರುಕೆರೆ ಬಳಿಯ ರಂಗಾಪುರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಈ ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿಡಲು ಕೋರ್ಟ್ ಆದೇಶಿಸಿತ್ತು. ಹೀಗಾಗಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನು ಕರೆತರಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಜೂನ್‌ 24ರಂದು ಆದೇಶ ನೀಡಿತ್ತು. ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆರೋಪಿಗಳ ವರ್ಗಾವಣೆ ಯಾಕೆ ಅಗತ್ಯ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಿವರಿಸಿದ್ದರು.

ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್‌, ಕೇಶವ್ ಮತ್ತು ನಿಖಿಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿತ್ತು. ಒಂದೇ ಜೈಲಿನಲ್ಲಿದ್ದರೇ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆ ಇದ್ದು, ನಾಲ್ವರು ಆರೋಪಿಗಳ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

Exit mobile version