Site icon Vistara News

Actor Darshan: ರೌಡಿಶೀಟರ್‌ ಮಗನ ಜೊತೆ ಜೈಲಿನಿಂದ ವಿಡಿಯೋ ಕಾಲ್;‌ ತನಿಖೆಗೆ ಗೃಹ ಸಚಿವರ ಸೂಚನೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ದೊರೆಯುತ್ತಿರುವ ಫೋಟೋ ಹಾಗೂ ವಿಡಿಯೋ ಬಹಿರಂಗವಾದ (Viral Photo) ಹಿನ್ನೆಲೆಯಲ್ಲಿ, ಆಂತರಿಕ ತನಿಖೆ ನಡೆಸಿ ವರದಿ ‌ನೀಡುವಂತೆ ಗೃಹ ಸಚಿವ ಪರಮೇಶ್ವರ್‌ (Home Minister G Paramaeshwara) ಸೂಚನೆ ನೀಡಿದ್ದಾರೆ.

ಬಂದೀಖಾನೆ ಡಿಜಿ ಮಾಲಿನಿ‌ ಕೃಷ್ಣಮೂರ್ತಿ ಅವರಿಗೆ ಕರೆ ಮಾಡಿರುವ ಗೃಹ ಸಚಿವ ಪರಮೇಶ್ವರ್, ಈ ಬಗ್ಗೆ ಪೂರ್ಣ ಮಾಹಿತಿ ಪಡೆದರು. ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆಯೇ, ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯವಾಯಿತು, ಫೋಟೋ ಹೊರಬೀಳಲು ಏನು ಕಾರಣ ಇತ್ಯಾದಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

ಜೈಲಿನಲ್ಲಿರುವ ನಟ ದರ್ಶನ್‌ ರೌಡಿಶೀಟರ್‌ ಜೊತೆ ಆರಾಮಾಗಿ ಕುಳಿತು ಕಾಫಿ- ಟೀ ಕುಡಿಯುತ್ತಿರುವ ಹಾಗೂ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ಫೋಟೋ- ವಿಡಿಯೋ ನಿನ್ನೆ ವೈರಲ್‌ ಆಗಿತ್ತು. ದರ್ಶನ್‌ಗೆ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ, ಕಾಫಿ-ಟೀ ಜೊತೆ ಸಿಗರೇಟ್ ಕೂಡ ಸಪ್ಲೈ ಮಾಡ್ತಿದ್ದಾರೆ, ಅವರಿಗೆ ವಿಡಿಯೋ ಕಾಲ್ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ ಎಂಬ ಅನುಮಾನ ಜನರಲ್ಲಿ ಮೂಡಿತ್ತು.

ಜೈಲಿಂದಲೇ ವಿಡಿಯೋ ಕಾಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ನಟ ದರ್ಶನ್ ವಿಡಿಯೋ ಕಾಲ್ ಮಾಡಿರುವುದು ರೌಡಿಶೀಟರ್ ಮಗನ ಜೊತೆ. ದರ್ಶನ್ ವಿಡಿಯೋ ಕಾಲ್‌ನಲ್ಲಿ ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ @ ಜನಾರ್ದನ್ ಮಗ ಸತ್ಯನ ಜೊತೆ ಮಾತಾಡಿದ್ದಾನೆ. ರೌಡಿಶೀಟರ್ ಮಾರ್ಕೆಟ್ ಧರ್ಮ ಜೈಲಿನಲ್ಲಿದ್ದು, ವಿಡಿಯೋ ಕಾಲ್ ಮಾಡಿ ದರ್ಶನ್ ಮುಖ ತೋರಿಸಿದ್ದಾನೆ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿದ್ದ ಸತ್ಯ, ಉಲ್ಟಾ ಮಚ್ಚಲ್ಲಿ ಕೆಎಲ್‌ಇ ಕಾಲೇಜ್ ವಿದ್ಯಾರ್ಥಿಗಳಿಗೆ ಹೊಡೆದಿದ್ದ. ಜೈಲಿಗೆ ಹೋಗಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ.

ಹೊರಬಂದವನು ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ದರ್ಶನ್ ನಮ್ ಸೆಲ್ ಪಕ್ಕದಲ್ಲೇ ಇರೋದು ಅಂತ ಮಾರ್ಕೆಟ್ ಧರ್ಮ ಹೇಳಿದ್ದಾನೆ. ಬಳಿಕ ಇರು ತೋರಿಸ್ತಿನಿ ಅಂತ ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದಾನೆ. ವಿಡಿಯೋ ರೆಕಾರ್ಡ್ ಮಾಡಿಕೊಂಡ ಸತ್ಯ, ಅದನ್ನ ಎಲ್ಲರಿಗೂ ತೋರಿಸಿಕೊಂಡು ಏರಿಯಾದಲ್ಲಿ ಬಿಲ್ಡಪ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ, ದರ್ಶನ್ ಮಾತಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜೈಲಿನಲ್ಲೇ ಕುಳಿತು ನಟ ದರ್ಶನ್ ಆಪ್ತರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತಾಡ್ತಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಕುಟುಂಬಸ್ಥರ ಜೊತೆ ಕೂಡ ದರ್ಶನ್ ವಿಡಿಯೋ ಕಾಲ್ ಮೂಲಕ ಮಾತಾಡಿರುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತಿದೆ. ವಿಡಿಯೋ ಕಾಲ್ ಮೂಲಕ ದರ್ಶನ್ ಆಪ್ತರ ಯೋಗಕ್ಷೇಮ ವಿಚಾರಿಸಿದ ವಿಡಿಯೋ ಕೂಡ ಇದೀಗ ವೈರಲ್ ಆಗ್ತಿದೆ. ದರ್ಶನ್ ಪಾಲಿಗೆ ಸೆರೆಮನೆ ಅರಮನೆ ಆಗಿದೆಯಾ? ದರ್ಶನ್​ಗೆ ಕೇಳಿದ ಸೌಲಭ್ಯಗಳೆಲ್ಲಾ ಸಿಗ್ತಿದ್ಯಾ? ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನಾಗ್ತಿದೆ ಎಂದು ಜನರು ಕೇಳುತ್ತಿದ್ದಾರೆ. ಜೈಲಿನಲ್ಲಿ ದುಡ್ಡು ಕೊಟ್ರೆ ಎಲ್ಲಾ ಸಿಗುತ್ತದೆ ಎನ್ನುವ ಮಾತು ಇದೀಗ ನಿಜವಾದಂತೆ ಕಾಣುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಮನೆಯೂಟ ಕೊಡಲು ಆಗಲ್ಲ ಅಂದಿದ್ದ ಜೈಲಾಧಿಕಾರಿಗಳು ಇದೀಗ ಸಿಗರೇಟ್, ಮೊಬೈಲ್​ ಕೊಟ್ಟಿದ್ದಾರಾ? ದರ್ಶನ್ ಅವರಿಗೆ ಬೇಕಾಗಿರೋ ಸೌಲಭ್ಯ ಮಾಡಿಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಈ ಒಂದು ಫೋಟೋದಿಂದ ಮೂಡಿದೆ.

ಇದನ್ನೂ ಓದಿ: Actor Darshan: ದರ್ಶನ್‌ಗೆ ರಾಜಾತಿಥ್ಯ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು; ಜೈಲು ರೆಸಾರ್ಟ್‌ ಆಗಬಾರ್ದು ಎಂದು ಕಿಡಿ

Exit mobile version