ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ನಟ ದರ್ಶನ್‌ನನ್ನು (Actor Darshan) ಭದ್ರತೆ ದೃಷ್ಟಿಯಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.
ದರ್ಶನ್‌ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅವಕಾಶ ಕೊಡುವಂತೆ ಎಸ್‌ಪಿಪಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿ ಪುರಸ್ಕರಿಸಿದರೆ ತುಮಕೂರು ಜೈಲಿಗೆ ಕಳಿಸಲಾಗುತ್ತದೆ. ಇಲ್ಲವಾದರೆ ಪರಪ್ಪನ ಅಗ್ರಹಾರದ ಭದ್ರತಾ ಸಿಬ್ಬಂದಿ ಕೊಠಡಿಯಲ್ಲೇ ನಟ ಕಾಲ ಕಳೆಯಬೇಕಾಗಿದೆ.
ಬೇರೆ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿರುವ ಕಾರಣಗಳೆಂದರೆ, ಜನಪ್ರಿಯ ನಟನಾಗಿರುವುದರಿಂದ ಹಲವರು ಪರಿಚಯವಿದ್ದು ಕೈದಿಗಳ ನಡುವೆ ಗಲಾಟೆಯಾಗುವ ಸಾಧ್ಯತೆ ಇದೆ. ಸಹ ಕೈದಿಗಳು ದರ್ಶನ್ ಮೇಲೆ ಅಟ್ಯಾಕ್ ಮಾಡಬಹುದು. ಪ್ರಕರಣದಲ್ಲಿರುವ ಹಲವು ಆರೋಪಿಗಳಿಗೆ ರೌಡಿ ಕಾಂಟ್ಯಾಕ್ಟ್ ಇರುವ ಹಿನ್ನೆಲೆಯಲ್ಲಿ, ರೌಡಿಗಳ ಮುಖಾಂತರ ಸಾಕ್ಷಿ ನಾಶ ಮಾಡುವಲ್ಲಿ ಯತ್ನಿಸುವ ಸಾಧ್ಯತೆ ಇದೆ. ಜೊತೆಗೆ ದರ್ಶನ್‌ನನ್ನು ನೋಡಲು ಕೈದಿಗಳಿಂದ ಜೈಲಿನೊಳಗೆ ಹಾಗೂ ಅಭಿಮಾನಿಗಳಿಂದ ಜೈಲಿನ ಹೊರಗೆ ದೊಂಬಿ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಎಸ್ಪಿಪಿ ಮನವಿ ಮಾಡಿದ್ದಾರೆ.
ಇಂದು ಜಾಮೀನು ಅರ್ಜಿ
ದರ್ಶನ್ ಸೇರಿದತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳು ಜಾಮೀನು ಕೋರಿ ಇಂದು ಎಸಿಎಂಎಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಲಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದರೆ ದರ್ಶನ್ ಪರ ವಾದ ಮಂಡನೆಯನ್ನು ಹಿರಿಯ ವಕೀಲ ಸಿ.ವಿ ನಾಗೇಶ್ ಮಾಡಲಿದ್ದಾರೆ.
ಜೈಲೂಟ ಸೇರದೆ ಪರದಾಟ
ಈ ನಡುವೆ ನಟ ದರ್ಶನ್. ಜೈಲೂಟ ಸೇರದೆ ಪರದಾಡುತ್ತಿದ್ದಾನೆ. ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಸಹ ಜೈಲಿನ ಆಹಾರ ಇಷ್ಟವಾಗದೆ ಒದ್ದಾಡುತ್ತಿದ್ದಾರೆ. ಮೊದಲೇ ಫಿಟ್ನೆಸ್ ಮೇಂಟೇನ್ ಮಾಡಲು ಚಿಕನ್, ಮಟನ್, ಪ್ರೂಟ್ಸ್, ಜೂಸ್ ಸೇವಿಸುತ್ತಿದ್ದ ದರ್ಶನ್, ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾನೆ. ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದಾರೆ. ಜೈಲೂಟ ತಿನ್ನಲಾಗದೆ ದರ್ಶನ್ ಪರದಾಟ ಅನುಭವಿಸಿದ್ದಾನೆ.
ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ವಿಲವಿಲ ಒದ್ದಾಡಿದ್ದು ಕಂಡುಬಂತು. ರಾತ್ರಿ ಸಹ ತಡವಾಗಿ ನಿದ್ರೆಗೆ ಜಾರಿದ ದರ್ಶನ್ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದು, ಕಾಫಿ ಸೇವಿಸದೆ ಬಿಸಿ ನೀರು ಕೇಳಿ ಪಡೆದಿದ್ದಾನೆ. ಸಹಕೈದಿಗಳು ಮಾತನಾಡಲು ಯತ್ನಿಸಿದರೂ ಅಷ್ಟಾಗಿ ಅವರ ಜೊತೆ ಬೆರೆಯಲಿಲ್ಲ. ʼನಿಮ್ಮ ಸಹವಾಸ ಸಾಕಪ್ಪ. ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿʼ ಎಂದು ಕೊಠಡಿಯಲ್ಲಿ ಸುಮ್ಮನೆ ಕೂತಿದ್ದಾನೆ ಎಂದು ಗೊತ್ತಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಶೇಷ ಬ್ಯಾರಕ್‌ನಲ್ಲಿ ದರ್ಶನ್ ಇದ್ದಾನೆ. ಧನರಾಜ್, ವಿನಯ್, ಪ್ರದೂಶ್ ಜೊತೆ ಒಂದೇ ಕೊಠಡಿಯಲ್ಲಿಡಲಾಗಿದೆ. ಸೆರೆವಾಸದಲ್ಲಿ ನಟ ಚಡಪಡಿಸುತ್ತಿದ್ದು, ಮೌನಕ್ಕೆ ಜಾರಿದ್ದಾನೆ. ಸಹ ಬಂದಿಗಳ ಜೊತೆ ಭದ್ರತಾ ವಿಭಾಗದ ಬ್ಯಾರಕ್‌ನಲ್ಲಿ ಸೆರೆವಾಸದಲ್ಲಿಡಲಾಗಿದೆ. ಸೊಳ್ಳೆಕಾಟದಿಂದ ದರ್ಶನ್ ಹಾಗೂ ಪವಿತ್ರಾ ಇಬ್ಬರೂ ನಲುಗಿದ್ದಾರೆ.
ನಿನ್ನೆ ಭಾನುವಾರ ಆಗಿದ್ದರಿಂದ ಕುಟುಂಬಸ್ಥರು ಮತ್ತು ಆಪ್ತರ ಭೇಟಿಗೆ ಅವಕಾಶ ನೀಡಿಲ್ಲ. ಇಂದು ದರ್ಶನ್ ಮತ್ತು ಪವಿತ್ರಾ ಕುಟುಂಬಸ್ಥರು ಹಾಗೂ ಆಪ್ತರ ಭೇಟಿ ಸಾಧ್ಯತೆ ಇದೆ. ಪವಿತ್ರಾ ಗೌಡ ಕೂಡ ಜೈಲು ಮೆನುವಿನಂತೆ ಚಪಾತಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ಸೇವನೆ ಮಾಡಿದ್ದು, ಸಹಖೈದಿಗಳ ಜೊತೆ ಬೆರೆಯದೆ ಬೇಸರದಲ್ಲಿಯೇ ದಿನ ಕಳೆಯುತ್ತಿದ್ದಾರೆ. ರಾತ್ರಿ ಬೇಗ ಮಲಗಿದರೂ ಪದೇ ಪದೆ ಎಚ್ಚರಗೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.
ಇದನ್ನೂ ಓದಿ: Actor Darshan: ದರ್ಶನ್ ಹಾಗೂ ನನ್ನ ಮಧ್ಯೆ ಮನಸ್ತಾಪ ತಂದಿದ್ದೇ ನಟಿ ನಿಖಿತಾ ಎಂದ ಓಂ ಪ್ರಕಾಶ್!