Site icon Vistara News

Actor Darshan: ದರ್ಶನ್‌ಗೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ; ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರುತ್ತಾರಾ ಚಾಲೆಂಜಿಂಗ್‌ ಸ್ಟಾರ್‌?

Actor Darshan

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್‌ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇಲ್ಲಿ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ.

ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

ಒಂದುವೇಳೆ ನ್ಯಾಯಾಂಗ ಬಂಧನವಾದರೆ ದರ್ಶನ್‌ ಬೆಂಗಳೂರಿನ‌ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಈಗಾಗಲೇ ಪ್ರಕರಣದ ಎ1 ಆರೋಪಿ, ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ‌ ದರ್ಶನ್ ಜೈಲು ಸೇರಿದ್ದರು. ಇಂದು ಮತ್ತೆ ನ್ಯಾಯಾಂಗ ಬಂಧನವಾದರೆ ಅವರು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗುತ್ತದೆ.

ಪೊಲೀಸರಿಂದ ಸಿದ್ಧತೆ

ದರ್ಶನ್ ಸೇರಿ 4 ಜನ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸರು ಅದಕ್ಕಾಗಿ ಸಿದ್ಧತೆ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಕಳೆದ 12 ದಿನಗಳಿಂದ ಎಲ್ಲ 17 ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಸಂಗ್ರಹಿಸಿದ್ದಾರೆ.

ಕೊಲೆ ನಡೆದ ಆರ್.ಆರ್‌.ನಗರ ಶೆಡ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಾಕ್ಷ್ಯ ಕಲೆ ಹಾಕಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತಿತರರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿಯೊಂದು ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್‌ ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಇದನ್ನೂ ಓದಿ: Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Exit mobile version