ಮುಂಬೈ: ಲೋನಾವಾಲಾ (Lonavala)ದಲ್ಲಿ ನಡೆಯುತ್ತಿದ್ದ ಅಶ್ಲೀಲ ವಿಡಿಯೊ (Adult Movies) ದಂಧೆಯನ್ನು ಭೇದಿಸಲಾಗಿದ್ದು, ಈ ಸಂಬಂಧ ಪುಣೆ ಗ್ರಾಮೀಣ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಮಾಡುವ ಉದ್ದೇಶದಿಂದ ಅಶ್ಲೀಲ ವಿಡಿಯೊವನ್ನು ಚಿತ್ರೀಕರಿಸಲು ಯುವಕರ ಗುಂಪು ಲೋನಾವಾಲಾದಲ್ಲಿ ಹಲವು ವಿಲ್ಲಾಗಳನ್ನು ಬಾಡಿಗೆಗೆ ಪಡೆದಿತ್ತು ಎಂದು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ (Crime News).
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋನಾವಾಲಾ ಪೊಲೀಸರು ಹಲವು ಅಶ್ಲೀಲ ವಿಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋನಾವಾಲಾದಲ್ಲಿ ವಿಲ್ಲಾಗಳನ್ನು ಬಾಡಿಗೆಗೆ ಪಡೆದ ಯುವಕರು ಮತ್ತು ಮಹಿಳೆಯರನ್ನು ಒಳಗೊಂಡ ತಂಡದ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದವು. ಬಳಿಕ ಪೊಲೀಸರು ದಾಳಿ ನಡೆಸಿದ ಚಿತ್ರೀಕರಣಕ್ಕೆ ಬಳಸುತ್ತಿದ್ದ ಅನೇಕ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಐವರು ಮಹಿಳೆಯರು
ʼʼಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಐವರು ಮಹಿಳೆಯರು ಸೇರಿದಂತೆ 13 ಮಂದಿಯನ್ನು ವಿಲ್ಲಾಗಳಿಂದ ಬಂಧಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ ಇವರು ವೆಬ್ ಸರಣಿಗಳು ಮತ್ತು ಒಟಿಟಿಯಲ್ಲಿ ಪ್ರಸಾರವಾಗುವ ಶೋಗಳಲ್ಲಿ ನಟಿಸುವ ಆಕರ್ಷಣೆಗೆ ಒಳಗಾಗಿದ್ದರುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼʼಲೋನಾವಾಲಾ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತ್ಯಸಾಯಿ ಕಾರ್ತಿಕ್ ಅವರ ಮೇಲ್ವಿಚಾರಣೆಯಲ್ಲಿ ಲೋನಾವಾಲಾ ಪೊಲೀಸರು ಆರೋಪಿಗಳಿಂದ ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕೆ ಬಳಸಲಾದ 6.72 ಲಕ್ಷ ರೂ.ಮೌಲ್ಯದ ಕ್ಯಾಮೆರಾಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆʼʼ ಎಂದು ಅವರು ವಿವರಿಸಿದ್ದಾರೆ.
ಅಶ್ಲೀಲ ಚಲನಚಿತ್ರಗಳನ್ನು ನೋಡಲು ಆಸಕ್ತಿ ಹೊಂದಿರುವ ಜನರಿಂದ ʼಚಂದಾದಾರಿಕೆ ಶುಲ್ಕʼ ಪಡೆಯುವ ಮೂಲಕ ಆರೋಪಿಗಳು ಹಣವನ್ನು ಸಂಪಾದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 292 (ಯಾವುದೇ ಅಶ್ಲೀಲ ವಸ್ತು ಮಾರಾಟ ಮಾಡುವುದು, ವಿತರಿಸುವುದು, ಪ್ರದರ್ಶನ ಮಾಡುವುದು ಅಥವಾ ಹೊಂದುವುದು), 293 (20 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು, ಬಾಡಿಗೆಗೆ ನೀಡುವುದು, ವಿತರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದು), 34 (ಸಾಮಾನ್ಯ ಉದ್ದೇಶ) ಮುಂತಾದ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬಂಧಿತರನ್ನು ಕೋಲ್ಕತ್ತಾದ ವಿಷ್ಣು ಮುನ್ನಾಸಾಬ್ (30), ಉತ್ತರ ಪ್ರದೇಶದ ಜಾವೇದ್ ಖಾನ್ (35) ಮತ್ತು ಸಮೀರ್ ಆಲಂ (26), ಚಂದ್ರಾಪುರದ ಬುದ್ಧಸೇನ್ ಶ್ರೀವಾಸ್ (29), ಮುಂಬೈಯ ಅನೂಪ್ ಚೌಬೆ (29), ಥಾಣೆಯ ರಾಹುಲ್ ನೆವ್ರೇಕರ್ (38), ಹರಿಯಾಣದ ರಾಮ್ ಕುಮಾರ್ ಯಾದವ್ (21) ಮತ್ತು ಮನೀಶ್ ಚೌಧರಿ (20), ಗುಜರಾತ್‌ನ ಅನಿಕೇತ್ ಶರ್ಮಾ (19) ಮತ್ತು ವಾಶನ್ ವರ್ಮಾ (19) ಎಂದು ಗುರುತಿಸಲಾಗಿದೆ. ಜತೆಗೆ ಮಾವಲ್ ತಾಲೂಕಿನ ಮಳವಲಿ ನಿವಾಸಿಗಳಾದ ಸುಖದೇವ್ ಜಾಧವ್ (52), ಆಕಾಶ್ ಶಿಂಧೆ (32) ಮತ್ತು ಸನ್ನಿ ಶೇಡ್ಗೆ (35) ವಿರುದ್ಧವೂ ದೂರು ದಾಖಲಾಗಿದೆ. ಬಂಗಲೆಯಲ್ಲಿ ಅಶ್ಲೀಲ ಚಿತ್ರಗಳ ಶೂಟಿಂಗ್ ನಡೆಯುತ್ತಿರುವುದು ಗೊತ್ತಿದ್ದೂ ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Filming Adult Movies: ಅಶ್ಲೀಲ ವಿಡಿಯೊ ಚಿತ್ರೀಕರಣ, ಪ್ರಸಾರ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಬಂಗಲೆಯನ್ನು ಆರೋಪಿಗಳಿಗೆ 30,000 ರೂ.ಗೆ ಬಾಡಿಗೆಗೆ ನೀಡಲಾಗಿತ್ತು. ಅದರಲ್ಲೂ ಆರೋಪಿಗಳ ಗುರುತಿನ ದಾಖಲೆಗಳನ್ನು ಪರಿಶೀಲಿಸದೆ 20,000 ರೂ.ಗಳನ್ನು ಮುಂಗಡವಾಗಿ ಪಡೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ