ಪಟನಾ: ಕೊಲೆ, ದರೋಡೆ, ಗೂಂಡಾಗಿರಿ, ಕಳ್ಳತನ ಸೇರಿ ಹಲವು ಕುಕೃತ್ಯಗಳಿಗೆ ದೇಶಾದ್ಯಂತ ಅಪಖ್ಯಾತಿ ಗಳಿಸಿದ್ದ ಬಿಹಾರದಲ್ಲಿ (Bihar) ಕೆಲ ವರ್ಷಗಳಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ, ಇತ್ತೀಚೆಗೆ ಕಳ್ಳತನದ ಪ್ರಕರಣಗಳು (Theft Cases) ಜಾಸ್ತಿಯಾಗುತ್ತಿದ್ದು, ಮತ್ತೆ ಬಿಹಾರ ಸುದ್ದಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ (Darbhanga District) ರಿಯಲ್ ಎಸ್ಟೇಟ್ (Real Estate) ಕುಳಗಳ ಮಾಫಿಯಾಗೆ ಸಿಲುಕಿದ ಕೆರೆಯೊಂದು ಮಾಯವಾಗಿದೆ. ಇಡೀ ಕೆರೆಯನ್ನೇ ದಂಧೆಕೋರರು ನುಂಗಿ ನೀರು ಕುಡಿದಿದ್ದಾರೆ.
ಹೌದು, ದರ್ಭಾಂಗ ಜಿಲ್ಲೆಯಲ್ಲಿರುವ ಕೆರೆಯೊಂದು ಭೂಮಾಫಿಯಾಗೆ ಸಿಲುಕಿದ್ದು, ದುಷ್ಕರ್ಮಿಗಳು ಇಡೀ ಕೆರೆಯನ್ನು ಮುಚ್ಚಿಸುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಕೆರೆಯನ್ನು ಮಣ್ಣನಿಂದ ಮುಚ್ಚಿಸಲಾಗುತ್ತಿದೆ. ರಾತ್ರೋರಾತ್ರಿ ಟ್ರಕ್‌ಗಳು ಕೆರೆಯ ಬಳಿ ಬಂದು ಮಣ್ಣು ಸುರಿದು ಹೋಗುತ್ತಿವೆ. ಹೀಗೆಯೇ ಆದರೆ, ಹನಿ ನೀರು ಕೂಡ ಇರದಂತೆ ಇಡೀ ಕೆರೆಯನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಎಂದು ಜಿಲ್ಲೆಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭೂಮಿಗೆ ಬಂಗಾರದ ಬೆಲೆ, ಕೆರೆಗೆ ‘ಬಲೆ’
ದರ್ಭಾಂಗ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಇದರಿಂದಾಗಿ ಭೂ ಮಾಫಿಯಾದಲ್ಲಿ ತೊಡಗಿರುವವರು ಕೆರೆಯನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. “10-15 ದಿನಗಳಿಂದ ಮಣ್ಣಿನಿಂದ ಕೆರೆಯನ್ನು ಮುಚ್ಚಿಸಲಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಭೂಮಿಗೆ ಬಂಗಾರದ ಬೆಲೆ ಬಂದ ಕಾರಣ ಕೆರೆಯ ಒತ್ತುವರಿಗೆ ಸಂಚು ರೂಪಿಸಲಾಗಿದೆ. ರಾತ್ರಿ ವೇಳೆಯೇ ಮಣ್ಣು ತಂದು ಸುರಿಯಲಾಗುತ್ತಿದೆ. ಇದಕ್ಕೂ ಮೊದಲು ಕೂಡ ಮಣ್ಣು ಸುರಿಯುವ ಕೆಲಸವನ್ನು ತಡೆಯಲಾಗಿತ್ತು. ಈಗ ಮತ್ತೆ ಮುಂದುವರಿದಿದೆ” ಎಂದು ಸಬ್ ಡಿವಿಷನಲ್ ಪೊಲೀಸ್ ಆಫೀಸರ್ (ಎಸ್‌ಡಿಪಿಒ) ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: HD Kumaraswamy : ವಿದ್ಯುತ್ ಕಳ್ಳತನ ಪ್ರಕರಣ; 68,526 ರೂಪಾಯಿ ದಂಡ ಕಟ್ಟಿದ ಎಚ್.ಡಿ. ಕುಮಾರಸ್ವಾಮಿ
ದಂಧೆ ಕೋರರು ಈಗಾಗಲೇ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಕೆರೆಯ ಅಂಗಳದಲ್ಲಿ ಗುಡಿಸಲುಗಳನ್ನು ನಿರ್ಮಿಸುವುದು, ಅಲ್ಲಿಯೇ ಠಿಕಾಣಿ ಹೂಡುವುದು, ರಾತ್ರಿ ವೇಳೆ ಮಣ್ಣು ಸುರಿಯುವುದು ಸೇರಿ ಇಡೀ ಕೆರೆಯನ್ನು ಅತಿಕ್ರಮಣ ಮಾಡಿಕೊಳ್ಳಲು ಹಲವು ರೀತಿಯಲ್ಲಿ ಸಂಚು ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸ್ಥಳೀಯರ ದೂರಿನ ಬಳಿಕ ಕೆರೆಯಲ್ಲಿ ಮಣ್ಣು ಸುರಿಯುವುದನ್ನು ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. 2022ರ ನವೆಂಬರ್‌ನಲ್ಲಿ ಬೆಗುಸರಾಯ್‌ನಲ್ಲಿ ರೈಲ್ವೆ ಎಂಜಿನ್ ಒಂದನ್ನು ಕಳ್ಳತನ ಮಾಡಲಾಗಿತ್ತು. ಅಷ್ಟೇ ಏಕೆ ರೋಹ್ಟಸ್ ಜಿಲ್ಲೆಯಲ್ಲಿ 2023ರ ಆರಂಭದಲ್ಲಿ ದುಷ್ಕರ್ಮಿಗಳು ಸೇತುವೆಯ ಭಾಗವೊಂದನ್ನೇ ಕಳ್ಳತನ ಮಾಡಿದ್ದರು. ಸುಮಾರು 247 ಕೆ.ಜಿ ತೂಕದ ಸೇತುವೆ ಭಾಗವನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ