ನವ ದೆಹಲಿ: ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉಗ್ರರ ಬೇಟೆಯನ್ನು ಚುರುಕುಗೊಳಿಸಿದ್ದು, ದೇಶದ ರಾಜಧಾನಿ ದೆಹಲಿಯಲ್ಲಿಯೇ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಜತೆ ಸಂಬಂಧ ಹೊಂದಿದ ಉಗ್ರನೋರ್ವನನ್ನು (Terrorist Arrest) ಬಂಧಿಸಲಾಗಿದೆ.
2021ರಲ್ಲಿ ಕರ್ನಾಟಕದ ಭಟ್ಕಳದಲ್ಲಿ ಬಂಧಿಸಲ್ಪಟಿದ್ದ ಐಸಿಸ್ ಉಗ್ರ, ಜಾಲಿಯ ಉಮರ್ ಸ್ಟ್ರೀಟ್ ನಿವಾಸಿ ಜುಫ್ರಿ ಜವಾಹರ್ ದಾಮುದಿ (30) ನೀಡಿದ್ದ ಮಾಹಿತಿಯ ಆಧಾರದಲ್ಲಿ ಈತನನ್ನು ಬಂಧಿಸಿಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತನನ್ನು ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ದೆಹಲಿಯ ಬಟ್ಲಾ ಹೌಸ್‌ನಲ್ಲಿರುವ ಆತನ ನಿವಾಸದಲ್ಲಿಯೇ ಹೆಡೆಮುರಿಕಟ್ಟಲಾಗಿದೆ. ಆತ ಐಎಸ್ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ಆನ್‌ಲೈನ್‌ನಲ್ಲಿಯೂ ಐಎಸ್ ಪರವಾಗಿ ಕೆಲಸ ಮಾಡುವುದರಲ್ಲಿ ಸಕ್ರೀಯವಾಗಿದ್ದ ಎನ್ನಲಾಗಿದೆ.
ಪಟನಾ ಮೂಲದ ಮೊಹ್ಸಿನ್ ಐಎಸ್ ಬಗ್ಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಸಹಾನುಭೂತಿ ಹೊಂದಿರುವವರಿಂದ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಹೀಗೆ ಸಂಗ್ರಹವಾದ ಹಣವನ್ನು ಆತ ಕ್ರಿಪ್ಟೋಕರೆನ್ಸಿ ಮೂಲಕ ಸಿರಿಯಾ ಮತ್ತು ಇತರ ದೇಶಗಳಲ್ಲಿ ಚಟುವಟಿಕೆ ನಡೆಸುತ್ತಿರುವ ಐಎಸ್‌ಗೆ ರವಾನಿಸುತ್ತಿದ್ದ ಎನ್ನಲಾಗಿದೆ.
ಬಂಧಿತನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಏಳು ದಿನಗಳ ಕಾಲ ಎನ್‌ಐಎ ತನ್ನ ವಶಕ್ಕೆ ಪಡೆದುಕೊಂಡು, ತನಿಖೆ ಮುಂದುವರಿಸಿದೆ. ಕಳೆದ ವಾರ ಎನ್‌ಐಎಯು ಬೆಂಗಳೂರು, ತುಮಕೂರು ಸೇರಿದಂತೆ ದೇಶದ 13ಕಡೆ ದಾಳಿ ನಡೆಸಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದ 48 ಮಂದಿಯನ್ನು ಬಂಧಿಸಿತ್ತು. ಇವರಲ್ಲಿ ಕೆಲವರು ಐಎಸ್ ಸಂಬಂಧ ಹೊಂದಿದ್ದರೆನ್ನಲಾಗಿದ್ದು, ಹೀಗಾಗಿ ಮೊಹ್ಸಿನ್ ಬಂಧನ ಮಹತ್ವ ಪಡೆದಿದೆ ಎನ್ನಲಾಗುತ್ತಿದೆ.
ಭಟ್ಕಳದಲ್ಲಿ ಬಂಧಿಸಿಲ್ಪಟ್ಟಿದ್ದ ದಾಮುದಿ ಉಗ್ರ ಸಂಘಟನೆಯ ನಿಯತಕಾಲಿಕೆ ʼವಾಯ್ಸ್ ಆಫ್ ಹಿಂದ್ʼ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದ. ಈತನಿಂದ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು, ಹಾರ್ಡ್ ಡಿಸ್ಕ್‌ಗಳು, ಮೆಮೊರಿ ಕಾರ್ಡ್‌ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನು ಪರಿಶೀಲಿಸಿದಾಗ ಮೊಹ್ಸಿನ್ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಭಾರತದಲ್ಲಿ ಅಶಾಂತಿಯನ್ನು ಉಂಟುಮಾಡುವ ಕೆಲಸದಲ್ಲಿ ಇವರೆಲ್ಲರೂ ತೊಡಗಿದ್ದರು ಎಂದು ಎನ್‌ಐಎ ಮೂಲಗಳು ವಿವರಿಸಿವೆ.
ಇದನ್ನೂ ಓದಿ| Terror Accused | ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ, ಒಂದೇ ದಿನ ಇಬ್ಬರು ಅರೆಸ್ಟ್!