ರಾಯಚೂರು: ರಾಯಚೂರಲ್ಲಿ (Raichur news) ಅಕ್ಷರ ದಾಸೋಹ (Akshra dasoha) ಅಧಿಕಾರಿಯೊಬ್ಬರು ಆತ್ಮಹತ್ಯೆಗೆ (Self Harming Attempt) ಯತ್ನಿಸಿದ್ದಾರೆ. ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ವರದಿಯಾಗುತ್ತಿರುವ ಇಂಥ ಮೂರನೇ ಪ್ರಕರಣವಾಗಿದೆ.
ಲಿಂಗಸಗೂರು ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕ ಮೌನೇಶ್ ಕಂಬಾರ ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಸುಮಾರು 40ಕ್ಕೂ ಹೆಚ್ಚು ನಿದ್ರೆ ಟ್ಯಾಬ್ಲೆಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ತಿಂಗಳು ಹಿಂದಷ್ಟೇ ಸಹಾಯ ನಿರ್ದೇಶಕರಾಗಿ ಇವರು ನೇಮಕಗೊಂಡಿದ್ದರು. ಕೆಲಸದ ಜತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಏಕಾಏಕಿ ಕಚೇರಿಯಿಂದ ಒಂದು ದಿನದ ಮಟ್ಟಿಗೆ ರಜೆ ಪಡೆದಿದು ಮನೆಗೆ ಬಂದಿದ್ದ ಮೌನೇಶ್, ಮನೆಯಲ್ಲೇ ಟ್ಯಾಬ್ಲೆಟ್‌ಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಲಿಂಗಸಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದ ತಿಂಗಳು ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಭಾರಿ ಸುದ್ದಿಯಾಗಿದೆ. ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಅವರು ಬರೆದಿಟ್ಟ ಡೆತ್‌ನೋಟ್ ಇದೀಗ ಸಚಿವರ ತಲೆದಂಡ ಪಡೆದಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಮಹಾ ನಿರ್ದೇಶಕರೊಬ್ಬರು ಕಾಮಗಾರಿ ನಡೆಸಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಬಿಲ್ ಹಣ ಬಿಡುಗಡೆಯಾಗಿತ್ತು.
ಸಿಡಿಲಿಗೆ ಬಾಲಕ, ಮಹಿಳೆ ಬಲಿ
ಗದಗ/ಕೊಪ್ಪಳ: ಎರಡು ಪ್ರತ್ಯೇಕ ಮಳೆ ಅವಘಡಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ಮಹಿಳೆ ದುರ್ಮರಣ ಹೊಂದಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಕುರಿ ಮೇಯಿಸಲು ಹೋದ ಬಾಲಕ ಸಾವು
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕುರಿ ಮೇಯಿಸಲು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಮರದ ಬಳಿ ನಿಂತಾಗ ಅವಘಡ ನಡೆದಿದೆ. ಗುಡ್ಡದಕೇರಿ ಬಡಾವಣೆಯ ನಿವಾಸಿ ಯಲ್ಲಪ್ಪ ಕಿಲೀಕೈ (17) ಮೃತ ಬಾಲಕ. ಪರಸಪ್ಪ ಕಿಲೀಕೈ (15) ಗಾಯಾಳುವಾಗಿದ್ದು, ಆತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಿಡಿಲಿಗೆ ರೈತ ಮಹಿಳೆ ಬಲಿ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೆ ರಾಂಪುರದಲ್ಲಿ ಸಿಡಿಲು ಬಡಿದು ರೈತ ಮಹಿಳೆ ರತ್ನಮ್ಮ ಓತಗೇರಿ(43) ಎಂಬುವವರು ಮೃತಪಟ್ಟಿದ್ದಾರೆ. ಹೊಲಕ್ಕೆ ರತ್ನಮ್ಮನೊಂದಿಗೆ ಆಕೆಯ ಅಕ್ಕ ದೇವಮ್ಮ ಸಹ ಹೋಗಿದ್ದರು. ಮಳೆ ಆರಂಭವಾಗುತ್ತಿದ್ದಂತೆ ದೇವಮ್ಮ ಮನೆ ಸೇರಿದ್ದರು. ಆದರೆ ಹೊಲದಲ್ಲಿದ್ದ ರತ್ನಮ್ಮಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್ ಪಾಸ್ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ