ಮುಂಬಯಿ: ಅಮರಾವತಿಯ ಕೆಮಿಸ್ಟ್ ಉಮೇಶ್ ಕೊಲ್ಹೆ ಅವರ ಹತ್ಯೆಗೆ ವಾಟ್ಸಾಪ್ ಗುಂಪಿನ ಫಾರ್‌ವರ್ಡ್ ಸಂದೇಶವೇ ಕಾರಣವಾಯಿತು ಎಂಬ ಅಂಶ ಬಹಿರಂಗಗೊಂಡಿದೆ.
ಕೊಲ್ಹೆ ಅವರ ಕೊಲೆಗೆ ವಾಟ್ಸಾಪ್ ಗುಂಪಿನ ಸದಸ್ಯರು ಹೇಗೆ ಸಂಚು ರೂಪಿಸಿದರು ಮತ್ತು ಕಾರ್ಯಗತಗೊಳಿಸಿದರು ಎಂಬುದನ್ನು ತನಿಖಾ ಮೂಲಗಳು ಬಹಿರಂಗಪಡಿಸಿವೆ.
54 ವರ್ಷದ ಉಮೇಶ್ ಕೊಲ್ಹೆ ಅವರನ್ನು ಜೂನ್ 21ರಂದು ಕೊಲ್ಲಲಾಗಿತ್ತು. ಪ್ರವಾದಿ ಕುರಿತು ಹೇಳಿಕೆ ನೀಡಿ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಉಮೇಶ್ ಬೆಂಬಲಿಸಿ ‘ಬ್ಲ್ಯಾಕ್ ಫ್ರೀಡಂ’ ಎಂಬ ವಾಟ್ಸಾಪ್ ಗುಂಪಿನಲ್ಲಿ ಸಂದೇಶ ಕಳಿಸಿದ್ದರು. ಪ್ರವಾದಿ ಬಗ್ಗೆಯೂ ಕೆಲವು ವಿವಾದಾತ್ಮಕ ಹೇಳಿಕೆ ಮಾಡಿದ್ದರು.
ಈ ಗುಂಪಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸದಸ್ಯರಿದ್ದರು. ಇದರಲ್ಲಿ ಇದ್ದ ಒಬ್ಬ ಮುಸ್ಲಿಂ ಸದಸ್ಯ, ನಂತರ ಈ ಸಂದೇಶವನ್ನು ʻಕಲೀಂ ಇಬ್ರಾಹಿಂ’ ಎಂಬ ವಾಟ್ಸಾಪ್ ಗ್ರೂಪ್‌ಗೆ ಫಾರ್‌ವರ್ಡ್ ಮಾಡಿದ್ದ. ಆ ಗುಂಪಿನ ಸದಸ್ಯರು ಈ ಪೋಸ್ಟ್‌ನಿಂದ ಆಕ್ರೋಶಗೊಂಡಿದ್ದರು. ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು.
ಮೂಲಗಳ ಪ್ರಕಾರ, ಉಮೇಶ್ ಕೊಲ್ಹೆ ಅವರ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್ ಎಂಬ ವ್ಯಕ್ತಿ. ʻರಹೇಬರ್ ಹೆಲ್ಪ್‌ಲೈನ್’ ಎಂಬ ಎನ್‌ಜಿಒ ನಡೆಸುತ್ತಿದ್ದ. ದುಷ್ಕರ್ಮಿಗಳು ಮೊದಲು ಜೂನ್ 20ರಂದು ಉಮೇಶ್‌ರನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆ ಯತ್ನ ಸಫಲವಾಗಿರಲಿಲ್ಲ.
ಇದನ್ನೂ ಓದಿ: ಅಮರಾವತಿ ಹತ್ಯೆ ಪ್ರಕರಣ | ಮಾಸ್ಟರ್ ಮೈಂಡ್ ಸೇರಿದಂತೆ ಏಳು ಮಂದಿ ಬಂಧನ