ದಾವಣಗೆರೆ: ಹುಬ್ಬಳ್ಳಿ ಬೆಂಡಿಗೇರಿಯ ಅಂಜಲಿ ಎಂಬ ಯುವತಿಯನ್ನು ಕೊಂದು (Anjali Murder Case) ತಲೆ ತಪ್ಪಿಸಿಕೊಂಡಿದ್ದ ಆರೋಪಿ ಗಿರೀಶ್, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ (Murder attempt) ಯತ್ನಿಸಿದ್ದ ಎಂದು ಗೊತ್ತಾಗಿದೆ. ಕೊಲೆ ಯತ್ನಕ್ಕೆ (Hubli crime) ಒಳಗಾದ ಮಹಿಳೆ ಈ ಕುರಿತು ದಾವಣಗೆರೆಯಲ್ಲಿ ದೂರು (FIR) ನೀಡಿದ್ದಾರೆ.
ಅಂಜಲಿ ಕೊಲೆ ಆರೋಪಿ ಗಿರೀಶ್ ಮೇಲೆ ಮತ್ತೊಂದು ಎಫ್‌ಐಆರ್ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗದಗ ಮೂಲದ ಲಕ್ಷ್ಮೀ ಹಾಗೂ ಗಂಡ ಮಹಾಂತೇಶ್ ಸವಟೂರು ಪ್ರಕರಣ ದಾಖಲಿಸಿದ್ದಾರೆ. ತುಮಕೂರಿನಿಂದ ವಿಶ್ವಮಾನವ ಎಕ್ಸಪ್ರೆಸ್ ಟ್ರೈನ್‌ನಲ್ಲಿ ಪತಿ ಜೊತೆ ಇವರು ಪ್ರಯಾಣಿಸುತ್ತಿದ್ದರು. ಆಗ ಅಂಜಲಿ ಕೊಲೆ ಆರೋಪಿ ಗಿರೀಶ್ ಹಲ್ಲೆ ಮಾಡಿದ್ದ.
ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ ಆರೋಪಿ ಗಿರೀಶ್, ರೈಲು ಹತ್ತಿದ ನಂತರ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಚಿಕ್ಕಜಾಜೂರಿನ ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ರೆಸ್ಟ್ ರೂಂ ಕಿಂಡಿಯಿಂದ ಗಮನಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ, ನಿನಗೆ ಅಕ್ಕತಂಗಿಯರಿಲ್ವಾ ಎಂದು ದಬಾಯಿಸಿದ್ದರು. ಆಗ ಮಹಿಳೆಗೆ ಚಾಕು ತೋರಿಸಿ ಗಿರೀಶ್ ಚುಚ್ಚಲು ಮುಂದಾಗಿದ್ದ.
ಹೊಟ್ಟೆಗೆ ಚಾಕು ಚುಚ್ಚಲು ಬಂದಾಗ ಮಹಿಳೆ ಎಡಗೈ ಮುಂದಿಟ್ಟು ತಡೆದಿದ್ದರು. ನಂತರ ಪತಿಯನ್ನು ಕರೆದಿದ್ದರು. ಪ್ರಯಾಣಿಕರು ಬಂದು ಸುತ್ತುವರಿದಾಗ, ಚಲಿಸುತ್ತಿದ್ದ ರೈಲು ಗಾಡಿಯಿಂದಲೇ ಆಸಾಮಿ ಜಿಗಿದಿದ್ದಾನೆ. ಮಹಿಳೆಯ ಕೈಗೆ ಚುಚ್ಚಿದ ಗಾಯವಾಗಿದೆ. ನಂತರ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮಾಯಕೊಂಡ ಬಳಿ ರೈಲಿನಿಂದ ಕೆಳಗೆ ಧುಮುಕಿದ್ದ ಗಿರೀಶ್ ಅಲಿಯಾಸ್ ವಿಶ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಹಲ್ಲೆಗೊಳಗಾದ ಮಹಿಳೆಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾಧ್ಯಮಗಳಲ್ಲಿ ಬಂದಿದ್ದ ಗಿರೀಶ್ ಫೋಟೋ ನೋಡಿದ್ದ ರೈಲ್ವೆ ಪೊಲೀಸರು, ಕೊಲೆ ಆರೋಪಿಯನ್ನು ಗುರುತಿಸಿದ್ದರು. ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಿದ್ದರು.
ಎಲ್ಲಿದ್ದ ಗಿರೀಶ್?
ಆರೋಪಿ ಗಿರೀಶ್ ಮೈಸೂರಿನಲ್ಲಿ ಮಹಾರಾಜ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತ ನೀಡಿದ ಮಾಹಿತಿ ಪ್ರಕಾರ, ಗಿರೀಶ್ ಮತ್ತು ಅಂಜಲಿ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಒಂದು ವಾರದ ಮೊದಲು 2 ಸಾವಿರ ರೂ. ಹಣ ಕೇಳಿದ್ದಳು. ಗಿರೀಶ್ ಅದನ್ನು ಫೋನ್ ಪೇ ಮಾಡಿದ್ದ. ಆ ನಂತರ ಗಿರೀಶನ ನಂಬರ್ ಅನ್ನು ಅಂಜಲಿ ಬ್ಲಾಕ್ ಲಿಸ್ಟ್‌ಗೆ ಹಾಕಿದ್ದಳು. ಆತನ ಫೋನ್ ರೀಸಿವ್ ಮಾಡುತ್ತಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಗಿರೀಶ್ ಮೈಸೂರನಿಂದ ಹುಬ್ಬಳ್ಳಿಗೆ ಬಂದು ನಸುಕಿನ ಜಾವ ಕೊಲೆ ಮಾಡಿದ್ದಾನೆ.
ಕೊಲೆ ನಂತರ ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್‌ನಿಂದ ಬಸ್ ಹತ್ತಿ ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ಟ್ರೈನ್ ಹತ್ತಿದ್ದ. ಮೈಸೂರಿನ ಮಹಾರಾಜ್ ಹೋಟೆಲ್‌ನಲ್ಲಿ ಮಲಗಿದ್ದ. ಆ ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ಬರಲೆಂದು ವಾಪಸ್ ಬರುತ್ತಿದ್ದಾಗ ಟ್ರೈನ್‌ನಲ್ಲಿ ಸಾರ್ವಜನಿಕರೊಡನೆ ಕಿರಿಕ್ ಆಗಿ ಟ್ರೈನ್‌ನಿಂದ ಹಾರಿದ್ದ.
ಪೊಲೀಸರು ಹೇಳೋದೇನು?
“ಅಂಜಲಿ ಕೊಲೆ ಆರೋಪಿ ಪತ್ತೆಗಾಗಿ ಎಂಟು ತಂಡಗಳನ್ನು ನಾವು ರಚನೆ ಮಾಡಿದ್ದೆವು. ನಿನ್ನೆ ರೇಲ್ವೆ ಪೊಲೀಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಆರೋಪಿ ಗಿರೀಶ್ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. ಬೆಳಗಿನ ಜಾವ 4.30ಗೆ ನಮ್ಮ ಕಸ್ಟಡಿಗೆ ದೊರೆತಿದ್ದಾನೆ. ಈತ ಮೈಸೂರಿನಿಂದ ಗೋವಾ, ಮಹಾರಾಷ್ಟ್ರ ಕಡೆ ಹೋಗಿ ತಲೆಮರೆಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದ. ಗಿರೀಶ್ ಮೇಲೆ ಬೈಕ್ ಕಳ್ಳತನ ವಿಚಾರದಲ್ಲಿಯೂ 4 ಪ್ರಕರಣಗಳು ದಾಖಲು ಆಗಿವೆ. ಅವನು ಹೇಳುವ ಪ್ರಕಾರ ಹುಡುಗಿ ಫೋನ್ ಬ್ಲಾಕ್ ಮಾಡಿದ್ದಳು. ನಾವು ಪ್ರೀತಿ ಮಾಡ್ತಿದ್ದೆವು ಎಂದು ಹೇಳಿದ್ದಾನೆ. ಪ್ರಜ್ಞೆ ಬಂದರ ನಂತರ ಪೂರ್ತಿ ಹೇಳಿಕೆ ಪಡೆದುಕೊಳ್ಳಲಾಗುವುದು” ಎಂದು ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ