ಹುಬ್ಬಳ್ಳಿ: ಅಂಜಲಿ ಕೊಲೆ ಪ್ರಕರಣದಲ್ಲಿ (Anjali Murder Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ಕೊಲೆ ಪ್ರಕರಣಕ್ಕೂ ಮೊದಲೇ ಅಂಜಲಿ ಅಜ್ಜಿ, ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ | Davanagere News: ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ
ಏನಿದು ಘಟನೆ?
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಬುಧವಾರ ಮುಂಜಾನೆ ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.
ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.
ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ
ಹುಬ್ಬಳ್ಳಿಯ ಯುವತಿ ನೇಹಾ ಹಿರೇಮಠ ಅವರನ್ನು ಪಾಗಲ್ ಪ್ರೇಮಿ ಫಯಾಜ್ ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಕಳೆದ ತಿಂಗಳು ಕೊಚ್ಚಿ ಕೊಲೆ ಮಾಡಿದ್ದ. ಇದು ಲವ್ ಜಿಹಾದ್ ಪ್ರಕರಣ ಎಂದು ರಾಜಾದ್ಯಂತ ತೀವ್ರ ಪ್ರತಿಭಟನೆ, ರಾಜಕೀಯ ಕೆಸರೆರಚಾಟಗಳಿಗೆ ಕಾರಣವಾಗಿತ್ತು.