ಕೋಲ್ಕತ್ತಾ: ಅನೈತಿಕ ಸಂಬಂಧದಲ್ಲಿ (Illicit relationship) ತೊಡಗಿದ್ದರು ಎನ್ನಲಾದ ಜೋಡಿಯೊಂಧರ ಮೇಲೆ ತೃಣಮೂಲ ಕಾಂಗ್ರೆಸ್ (Trinamoola Congress) ಕಾರ್ಯಕರ್ತರು ಅಮಾನುಷವಾಗಿ ಹಲ್ಲೆ (Assault Case) ನಡೆಸಿದ್ದು, ಇದರ ವಿಡಿಯೋ ಕ್ಲಿಪ್ ವೈರಲ್ (viral viedo) ಆದ ನಂತರ ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿವೆ. “ಮುಸ್ಲಿಂ ರಾಷ್ಟ್ರ ನೀತಿ ಸಂಹಿತೆ ಪ್ರಕಾರ ನಡೆದುಕೊಳ್ಳಲಾಗಿದೆ…” ಎಂದು ತೃಣಮೂಲ ಕಾಂಗ್ರೆಸ್ ಶಾಸಕನೊಬ್ಬ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾನೆ.
ಬಿದಿರಿನ ದೊಣ್ಣೆಗಳಿಂದ ಇಬ್ಬರನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿಯನ್ನು ತಜ್ಮುಲ್ ಅಲಿಯಾಸ್ “ಜೆಸಿಬಿ” ಎಂದು ಗುರುತಿಸಲಾಗಿದೆ. ಈತ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದ ಸ್ಥಳೀಯ ಟಿಎಂಸಿ ನಾಯಕ ಎಂದು ಹೇಳಲಾಗಿದೆ. ಸ್ಥಳೀಯ ಪಂಚಾಯ್ತಿಯ ತೀರ್ಪಿನ ನಂತರ ಈ ಘಟನೆ ನಡೆದಿದೆ. ಘಟನೆಯ ಕುರಿತು ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡು ತಜ್ಮುಲ್‌ನನ್ನು ಬಂಧಿಸಿದ್ದಾರೆ.
ಚೋಪ್ರಾ ಶಾಸಕ ಹಮೀದುಲ್ ರಹಮಾನ್, ಟಿಎಂಸಿಗೆ ತಜ್ಮುಲ್ ಜೊತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ʼಮಹಿಳೆಯ ಚಟುವಟಿಕೆಗಳು ಅನೈತಿಕವಾಗಿದ್ದವು. ಇದು ಹಳ್ಳಿಯ ವಿಷಯವಾಗಿದ್ದು, ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಘಟನೆಯನ್ನು ಖಂಡಿಸುತ್ತೇವೆ. ಆದರೆ ಮಹಿಳೆಯೂ ತಪ್ಪು ಮಾಡಿದ್ದಾಳೆ. ಅವಳು ತನ್ನ ಗಂಡ, ಮಗ ಮತ್ತು ಮಗಳನ್ನು ತೊರೆದಿದ್ದಾಳೆ. ಮುಸ್ಲಿಂ ರಾಷ್ಟ್ರದ ಪ್ರಕಾರ ಕೆಲವು ನೀತಿ ಸಂಹಿತೆ ಮತ್ತು ನ್ಯಾಯವಿದೆ. ಈಗ ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತೃಣಮೂಲ ಶಾಸಕ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಪಕ್ಷ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಈ ಘಟನೆಗೆ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟಿಎಂಸಿ ಹೇಳಿದೆ.
ಕೇಂದ್ರ ಸಚಿವ ಮತ್ತು ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಅವರು ಟಿಎಂಸಿಯ ಶಾಸಕನ “ಮುಸ್ಲಿಂ ರಾಷ್ಟ್ರ” ಉಲ್ಲೇಖದ ಬಗ್ಗೆ ಆತಂಕಪಟ್ಟಿದ್ದಾರೆ. “ಮುಸ್ಲಿಂ ರಾಷ್ಟ್ರ ಕೆಲವು ನಿಯಮಗಳ ಅಡಿಯಲ್ಲಿ ಶಿಕ್ಷೆಗಳನ್ನು ಚರ್ಚಿಸುವ ಹೇಳಿಕೆಗಳು ಕಳವಳ ಮೂಡಿಸುತ್ತವೆ. ಟಿಎಂಸಿ ಪಶ್ಚಿಮ ಬಂಗಾಳವನ್ನು ಷರಿಯಾ ಕಾನೂನನ್ನು ಅನ್ವಯಿಸುವ ರಾಜ್ಯವೆಂದು ಘೋಷಿಸುತ್ತಿದೆಯೇ?” ಎಂದು ಸುಕಾಂತ ಮಜುಂದಾರ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಂಗಾಳ ಪೊಲೀಸರು ಹೇಳಿದ್ದೇನು?
ಇಸ್ಲಾಂಪುರ ಪೊಲೀಸ್ ಹೇಳಿಕೆಯಲ್ಲಿ, “ಇಸ್ಲಾಂಪುರ ಪಿಡಿ ಅಡಿಯಲ್ಲಿ ಚೋಪ್ರಾ ಪಿಎಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಒಬ್ಬ ವ್ಯಕ್ತಿಯನ್ನು ಪೊಲೀಸರು ತಕ್ಷಣ ಗುರುತಿಸಿ ಬಂಧಿಸಿದ್ದಾರೆ. ಸಂತ್ರಸ್ತ ಜೋಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ” ಎಂದು ತಿಳಿಸಿದೆ. ಇಸ್ಲಾಂಪುರ ಪೊಲೀಸ್ ಅಧೀಕ್ಷಕ ಜೋಬಿ ಥಾಮಸ್ ಕೆ. ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕ್ಲಿಪ್ ಅನ್ನು ವೀಕ್ಷಿಸಿದ್ದಾರೆ ಮತ್ತು ಅದನ್ನು ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.
ಭಾರೀ ಸಂಖ್ಯೆಯ ಜನರು ನೋಡುತ್ತಿದ್ದಂತೆಯೇ ನೋವಿನಿಂದ ಅಳುತ್ತಿದ್ದ ಮಹಿಳೆಗೆ ಆರೋಪಿಗಳು ಥಳಿಸಿದ ದೃಶ್ಯ ವೈರಲ್ ಆಗಿದೆ. ಹಲ್ಲೆ ಮಾಡಿದಾತ ಆಕೆಯ ತಲೆಕೂದಲು ಎಳೆದು ಒದೆಯುವುದು ಕಂಡುಬಂದಿತು. ಆರೋಪಿಗಳು ವ್ಯಕ್ತಿಯೊಬ್ಬನಿಗೆ ದೊಣ್ಣೆಗಳಿಂದ ಥಳಿಸಿದ್ದಾರೆ.
ಇದನ್ನೂ ಓದಿ: Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ