ಲಖನೌ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್‌ಗೆ ಅನಾಮಿಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಪ್ರಯಾಗ್‌ರಾಜ್‌ಗೆ ಕೊಂಡೊಯ್ಯುವ ವೇಳೆ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮೇಲೆ ಆರೋಪಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಏನಾಗುತ್ತಿದೆ ಎನ್ನುವಷ್ಟರಲ್ಲಿಯೇ ಗ್ಯಾಂಗ್‌ಸ್ಟರ್‌ಗಳಿಬ್ಬರೂ ನೆಲದ ಮೇಲೆ ಹೆಣವಾಗಿ (Atiq Ahmed Shot Dead) ಬಿದ್ದಿದ್ದ ದೃಶ್ಯಗಳು ಲಭ್ಯವಾಗಿವೆ.
ಅಷ್ಟಕ್ಕೂ ಏನಾಯ್ತು?
ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ರ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ವಾಹನದಲ್ಲಿ ಕರೆದುಕೊಂಡು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದರು. ಪ್ರಯಾಗ್‌ರಾಜ್ ಮೆಡಿಕಲ್ ಕಾಲೇಜಿಗೆ ವಾಹನ ತೆರಳುತ್ತಲೇ ಅತೀಕ್ ಹಾಗೂ ಅಶ್ರಫ್ ವಾಹನದಿಂದ ಕೆಳಗಿಳಿದರು. ಇದೇ ವೇಳೆ ಅತೀಕ್ ಹಾಗೂ ಅಶ್ರಫ್ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು. ಪೊಲೀಸರು ಇಬ್ಬರನ್ನೂ ಕರೆದುಕೊಂಡು ಹೋಗುವಾಗ ಮಾಧ್ಯಮದವರ ಜತೆ ಅತೀಕ್ ಅಹ್ಮದ್ ಮಾತನಾಡಲು ಆರಂಭಿಸಿದ್ದರು.
ಹೀಗೆ ನಡೆಯಿತು ದಾಳಿ
ಪರಿಸ್ಥಿತಿ ಹೀಗಿರುವಾಗಲೇ ಅನಾಮಧೇಯ ವ್ಯಕ್ತಿಗಳು ಮೊದಲು ಅತೀಕ್ ಅಹ್ಮದ್ ಅವರ ಮೇಲೆ ಗುಂಡು ಹಾರಿಸಿದರು. ಇದಾದ ಕೆಲವೇ ಕ್ಷಣದಲ್ಲಿ ಅಶ್ರಫ್ ಅಹ್ಮದ್ ಮೇಲೆ ಗುಂಡು ಹಾರಿಸಿದರು. ನೋಡ ನೋಡುತ್ತಲೇ ಗುಂಡಿನ ದಾಳಿ ನಡೆದ ಕಾರಣ ಪೊಲೀಸರು ಹಾಗೂ ಮಾಧ್ಯಮದವರು ಚದುರಿಹೋದರು. ಅಷ್ಟೊತ್ತಿಗಾಗಲೇ ಇಬ್ಬರ ಮೇಲೂ ಹಲವು ಸುತ್ತಿನ ಗುಂಡಿನ ದಾಳಿ ನಡೆದ ಕಾರಣ, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದರು.
ಮೂವರು ದಾಳಿಕೋರರ ಬಂಧನ
ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಹಾಗೂ ಮಾಧ್ಯಮದವರ ಸಮೀಪ ನಿಂತು ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಅಚ್ಚರಿಯಾಗಿದ್ದು, ಬಂಧಿತರು ಯಾರು? ಅವರು ಯಾವ ಗ್ಯಾಂಗ್‌ಗೆ ಸೇರಿದವರು, ದಾಳಿ ನಡೆಸಿದ್ದು ಏಕೆ ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅತೀಕ್‌ನದ್ದು ಗ್ಯಾಂಗ್‌ಸ್ಟರ್ ಕುಟುಂಬ
ಅತೀಕ್ ಅಹ್ಮದ್‌ನದ್ದು ಗ್ಯಾಂಗ್‌ಸ್ಟರ್ ಕುಟುಂಬವಾಗಿತ್ತು. ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್ ಅಹ್ಮದ್ ಹಾಗೂ ಪುತ್ರ ಅಸಾದ್ ಅಹ್ಮದ್ ಸೇರಿ ಇವನ ಕುಟುಂಬದ ಹಲವರು ಗ್ಯಾಂಗ್‌ಸ್ಟರ್‌ಗಳಾಗಿದ್ದರು. ಹಾಗಾಗಿಯೇ, ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ನನ್ನು ಅತೀಕ್ ಅಹ್ಮದ್‌ನು ಜೈಲಿನಲ್ಲಿದ್ದೇ ಹತ್ಯೆ ಮಾಡಿಸಿದ್ದ. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಅಸಾದ್ ಅಹ್ಮದ್‌ನೇ ಉಮೇಶ್ ಪಾಲ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉಮೇಶ್ ಪಾಲ್ ಕೊಲೆ ಆರೋಪಿಗಳಾದ ಅತೀಕ್ ಅಹ್ಮದ್, ಅಶ್ರಫ್ ಅನಾಮಿಕರ ಗುಂಡೇಟಿಗೆ ಬಲಿ