ಲಖನೌ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್‌ರನ್ನು ಪೊಲೀಸರ ಸಮ್ಮುಖದಲ್ಲಿಯೇ ಗುಂಡಿಕ್ಕಿ ಕೊಂದ ಶೂಟರ್‌ಗಳು ಮಾಧ್ಯಮದವರಂತೆ ಸೋಗು ಹಾಕಿಕೊಂಡು ಆಗಮಿಸಿದ್ದರು ಎಂದು ಗೊತ್ತಾಗಿದೆ. ದೃಶ್ಯ ಮಾಧ್ಯಮದ ವರದಿಗಾರರಂತೆ ವಿಡಿಯೋ ಕ್ಯಾಮೆರಾ ಇಟ್ಟುಕೊಂಡು ಬಂದಿದ್ದ ಇವರು, ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್ ಅಹ್ಮದ್ ಹಾಗೂ ಅಶ್ರಫ್‌ರ ಮೇಲೆ ಹಿಂದಿನಿಂದ ಸತತವಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಇವೆಲ್ಲವೂ ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಈ ಮೂವರನ್ನು ಲೊವ್ಲೇಶ್ ತಿವಾರಿ, ಅರುಣ್ ಮೌರ್ಯ ಹಾಗೂ ಸನ್ನಿ ಎಂದು ಗುರುತಿಸಲಾಗಿದೆ. ಮೂವರನ್ನೂ ಪ್ರತ್ಯೇಕವಾಗಿಡಲಾಗಿದ್ದು, ಪ್ರತ್ಯೇಕವಾಗಿ ಹಿರಿಯ ಅಧಿಕಾರಿಗಳಿಂದ ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಈ ಪ್ರಕರಣದ ಹಿಂದಿನ ಸೂತ್ರಧಾರಿಗಳು ಯಾರು ಎಂಬುದು ಗೊತ್ತಾಗಿಲ್ಲವಾದರೂ, ಎದುರಾಳಿ ಗ್ಯಾಂಗ್‌ನವರ ಕೃತ್ಯ ಇದೆಂದು ಶಂಕಿಸಲಾಗಿದೆ.
ಅಪರಾಧ ನಡೆದ ರೀತಿ ನೋಡಿದರೆ ಇವರು ಶಾರ್ಪ್ ಶೂಟರ್‌ಗಳು ಎಂಬುದು ಗೊತ್ತಾಗುವಂತಿದೆ. ಪೊಲೀಸರ ಸಮ್ಮುಖದಲ್ಲಿಯೇ ಮೀಡಿಯಾದವರಂತೆ ವೇಷ ಮರೆಸಿಕೊಂಡು ಬಂದು ನಿಖರ ದಾಳಿ ನಡೆಸಿರುವುದು ನೋಡಿದರೆ ಇವರು ಅಪರಾಧ ಜಗತ್ತಿಗೆ ಹೊಸಬರಲ್ಲ ಎಂದು ತಿಳಿದುಬರುವಂತಿದೆ. ಅತೀಕ್ ಅಹ್ಮದ್ ಆಗಮನಕ್ಕೆ ಅರ್ಧ ಗಂಟೆಗೂ ಮುನ್ನ ದ್ವಿಚಕ್ರ ವಾಹನಗಳಲ್ಲಿ ಬಂದು ಕಾದಿದ್ದ ಇವರು ಪಿಸ್ತೂಲ್‌ಗಳ ಮೂಲಕ 14 ಸುತ್ತು ಗುಂಡು ಹಾರಿಸಿದ್ದಾರೆ.
ಅತೀಕ್ ಅಹ್ಮದ್‌ಗೆ ಹೆಚ್ಚಿನ ಗುಂಡುಗಳು ಬಿದ್ದಿವೆ. ದಾಳಿಕೋರರು ಸಾಕಷ್ಟು ಮದ್ದುಗುಂಡು ಹೊಂದಿಯೇ ಬಂದಿದ್ದು, ಯಾವ ಕಾರಣಕ್ಕೂ ಆತ ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿಯೇ ಬಂದಿದ್ದರು. ಅತೀಕ್ ಹಣೆಗೆ ಬಹಳ ಹತ್ತಿರದಿಂದ ಬಿದ್ದ ಮೊದಲ ಗುಂಡೇ ನಿಖರವಾಗಿದ್ದು ಆತನ ಪ್ರಾಣ ತೆಗೆದಿತ್ತು. ಆದರೆ ನಂತರವೂ ದಾಳಿಕೋರರು ಗುಂಡಿನ ಮಳೆಗರೆದಿದ್ದಾರೆ. ಇದು ಹಳೆಯ ದ್ವೇಷ ಹಾಗೂ ನುರಿತ ಅಪರಾಧ ಹಿನ್ನೆಲೆಗಳನ್ನು ಸೂಚಿಸುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಶೂಟರ್‌ಗಳು ʼಜೈ ಶ್ರೀ ರಾಮ್ʼ ಎಂದು ಕೂಗಿದ್ದು ಕೇಳಿಬಂದಿತ್ತು. ಆದರೆ ಇದು ನೋಟಕರ ದಾರಿ ತಪ್ಪಿಸುವ ತಂತ್ರವಾಗಿರುವಂತಿದ್ದು, ಅಪರಾಧಿಗಳು ಸ್ಪಷ್ಟ ಅಪರಾಧಿ ಹಿನ್ನೆಲೆಯವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಿನ್ನ ರಾತ್ರಿ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ರ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ವಾಹನದಲ್ಲಿ ಕರೆದುಕೊಂಡು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದರು. ಪ್ರಯಾಗ್‌ರಾಜ್ ಮೆಡಿಕಲ್ ಕಾಲೇಜಿಗೆ ವಾಹನ ತೆರಳುತ್ತಲೇ ಅತೀಕ್ ಹಾಗೂ ಅಶ್ರಫ್ ವಾಹನದಿಂದ ಕೆಳಗಿಳಿದು ಮಾಧ್ಯಮಗಳ ಜತೆ ಮಾತನಾಡುತ್ತ ನಡೆಯುತ್ತಿದ್ದಾಗ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: Atiq Ahmed Shot Dead: ರಾಜಕಾರಣ ಬಿಟ್ಟು ಗ್ಯಾಂಗ್‌ಸ್ಟರ್ ಆದ ಅತೀಕ್, ಕುಟುಂಬವನ್ನು ಬಲಿ ಕೊಟ್ಟಿದ್ದೇ ದುರಂತ