ಲಖನೌ: ‘ರೌಡಿಯ ಹೆಂಡತಿ ಒಂದಲ್ಲ ಒಂದು ದಿನ ವಿಧವೆಯಾಗುವುದು ನಿಶ್ಚಿತ’ ಎಂಬ ಮಾತಿದೆ. ಉತ್ತರ ಪ್ರದೇಶದ ಅತೀಕ್ ಅಹ್ಮದ್ ವಿಚಾರದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಅತೀಕ್ ಅಹ್ಮದ್ ಪತ್ನಿ ವಿಧವೆಯಾಗುವ ಜತೆಗೆ, ಇಡೀ ಕುಟುಂಬವನ್ನೇ ದಿಕ್ಕಾಪಾಲು ಮಾಡಿದ ಕುಖ್ಯಾತಿ ಅತೀಕ್ ಅಹ್ಮದ್‌ನದ್ದು. ಕೊಲೆ ಯತ್ನದಲ್ಲಿ ಜೈಲಿಗೆ ಹೋಗಿ, ಜೈಲಿನಿಂದ ಹೊರಬಂದು, ರಾಜಕಾರಣ ಪ್ರವೇಶಿಸಿದ ಅತೀಕ್ ಅಹ್ಮದ್ (Atiq Ahmed Shot Dead), ರಾಜಕಾರಣವನ್ನು ಮಾತ್ರ ಮಾಡಿಕೊಂಡಿದ್ದರೆ ಇಂದು ಅನಾಮಧೇಯ ವ್ಯಕ್ತಿಗಳ ಗುಂಡಿನ ದಾಳಿಗೆ ಬೀದಿ ಹೆಣವಾಗುತ್ತಿರಲಿಲ್ಲವೇನೋ….
ಹೌದು, ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅನಾಮಿಕರ ಗುಂಡಿನ ದಾಳಿಗೆ ಬೀದಿ ಹೆಣವಾಗಿದ್ದಾರೆ. ಅತೀಕ್‌ನ ಮೂರನೇ ಮಗ ಅಸಾದ್ ಅಹ್ಮದ್‌ನನ್ನು ಕೆಲವು ದಿನಗಳ ಹಿಂದಷ್ಟೇ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಅತೀಕ್‌ನ ಹೆಂಡತಿ ಶೈಸ್ತಾ ಪರ್ವೀನ್ ವಿರುದ್ಧವೂ ಪ್ರಕರಣಗಳಿದ್ದು, ಆಕೆ ಪರಾರಿಯಾಗಿದ್ದಾರೆ. ಅತೀಕ್‌ನ ಇಬ್ಬರು ಹಿರಿಯ ಮಕ್ಕಳು ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ಅತೀಕ್‌ಗೆ ಇದ್ದ ಐವರ ಮಕ್ಕಳಲ್ಲಿ ಮೂವರ ಕತೆ ಇಷ್ಟೊಂದು ದುರಂತವಾಗಿದ್ದರೆ, ಕೊನೆಯ ಇಬ್ಬರು ಮಕ್ಕಳು ಆಶ್ರಯ ಕೇಂದ್ರದಲ್ಲಿದ್ದಾರೆ. ಒಟ್ಟಿನಲ್ಲಿ ಅತೀಕ್ ಗ್ಯಾಂಗ್‌ಸ್ಟರ್ ಆಗಿ, ಇಡೀ ಕುಟುಂಬವನ್ನು ಗೂಂಡಾಗಿರಿ ಇಳಿಸಿ, ಈಗ ಇಡೀ ಕುಟುಂಬವನ್ನೇ ಬೀದಿಗೆ ತಂದಿದ್ದು ಅತೀಕ್ ಎಂಬುದು ವಾಸ್ತವವಾಗಿದೆ.
ಕೊಲೆ ಯತ್ನದ ಪ್ರಕರಣ ಅತೀಕ್‌ನನ್ನು ಬದಲಾಯಿಸಿತು
ಪುಡಿ ರೌಡಿಯಾಗಿದ್ದ ಅತೀಕ್ ಅಹ್ಮದ್ ಮೇಲೆ 1984ರಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಯಿತು. ಪ್ರಕರಣದಲ್ಲಿ ಬಿಡುಗಡೆಯಾಗಿ ಬಂದ ಅತೀಕ್ ಅಹ್ಮದ್, 1989ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಲಹಾಬಾದ್ (ಪ್ರಯಾಗ್‌ರಾಜ್) ಕ್ಷೇತ್ರದಲ್ಲಿ ಸ್ಪರ್ಧಿಸಿದ. ಇದಾದ ನಂತರದ ಎರಡು ಚುನಾವಣೆಗಳಲ್ಲೂ ಅತೀಕ್ ಗೆಲುವು ಸಾಧಿಸಿದ. 1995ರಲ್ಲಿ ಸಮಾಜವಾದಿ ಪಕ್ಷ ಸೇರಿದ ಅತೀಕ್, 1996ರ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ. 2002ರಲ್ಲಿ ಅಪ್ನಾ ದಳ ಸೇರಿದ ಆತ, 2002ರಲ್ಲಿ ಮತ್ತೆ ಗೆಲುವು ಸಾಧಿಸಿದ. 2004ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ.
ರಾಜುಪಾಲ್ ಹತ್ಯೆ ನಂತರ ಎಲ್ಲವೂ ಬದಲು
ರಾಜಕಾರಣವೊಂದನ್ನೇ ಮಾಡಿಕೊಂಡಿದ್ದರೆ ಅತೀಕ್ ಅಹ್ಮದ್‌ಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. 2004ರಲ್ಲಿ ಅಲಹಾಬಾದ್ ಪಶ್ಚಿಮ ಕ್ಷೇತ್ರದ ಉಪ ಚುನಾವಣೆಯಲ್ಲಿ ಅತೀಕ್ ಸಹೋದರ ಅಶ್ರಫ್ ಅಹ್ಮದ್, ಬಿಎಸ್‌ಪಿಯ ರಾಜು ಪಾಲ್ ವಿರುದ್ಧ ಗೆಲುವು ಸೋಲುಂಡರು. ಇದರ ಸೇಡಿನ ಭಾಗವಾಗಿಯೇ 2005ರಲ್ಲಿ ರಾಜು ಪಾಲ್ ಹತ್ಯೆಯಾಯಿತು. ಇದರಲ್ಲಿ ಅತೀಕ್ ಹಾಗೂ ಅಶ್ರಫ್ ಹೆಸರು ಕೇಳಿಬಂದವು. ಹಾಗೆಯೇ, ಉಮೇಶ್ ಪಾಲ್ ಹತ್ಯೆಯ ಬಳಿಕ ಅತೀಕ್ ಕುಟುಂಬದ ಅಂತ್ಯದ ಆರಂಭವಾಯಿತು. ಅತೀಕ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಅಸಾದ್ ಎನ್‌ಕೌಂಟರ್‌ನಲ್ಲಿ ಹತನಾದ. ಹೆಂಡತಿ ತಲೆಮರೆಸಿಕೊಂಡಳು. ಇಬ್ಬರು ಮಕ್ಕಳು ಕೂಡ ಜೈಲು ಸೇರಿದರು. ಕೊನೆಗೆ ಅತೀಕ್ ಹಾಗೂ ಅಶ್ರಫ್ ಬೀದಿ ಹೆಣವಾದರು. ಹೀಗೆ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಕುಟುಂಬವು ಬಹುತೇಕ ನಿರ್ನಾಮವಾಯಿತು.
ಇದನ್ನೂ ಓದಿ: Atiq Ahmed Shot Dead: ಪೊಲೀಸರ ಎದುರೇ ಅತೀಕ್, ಅಶ್ರಫ್ ಮೇಲೆ ಗುಂಡು ಹಾರಿಸಿದ್ದು ಹೇಗೆ? ಇಲ್ಲಿದೆ ವಿಡಿಯೊ