Site icon Vistara News

ಬಾಂಗ್ಲಾದೇಶದಲ್ಲಿ ಕೊಲೆ ಮಾಡಿ ಬೆಂಗಳೂರಿನಲ್ಲಿ ಅಡಗಿದ್ದ ಅಲ್‌ ಕೈದಾ ಉಗ್ರನ ಸೆರೆ

faisal ahamad

ಬೆಂಗಳೂರು: ಬಾಂಗ್ಲಾದೇಶದಲ್ಲಿ ವಿಜ್ಞಾನ ಬರಹಗಾರರೊಬ್ಬರನ್ನು ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಪಾಕ್‌ ಮೂಲದ ಉಗ್ರ ಸಂಘಟನೆ ಅಲ್‌ ಕೈದಾ ಜತೆಗೂ ಸಂಪರ್ಕ ಇರುವುದು ಪತ್ತೆಯಾಗಿದೆ.

ಫೈಜಲ್ ಅಹಮದ್ ಬಂಧಿತ ಕೊಲೆ ಆರೋಪಿ. ಕೋಲ್ಕತ್ತಾ ಪೊಲೀಸರ ವಿಶೇಷ ತಂಡ ಈತನನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದು, ಜುಲೈ 1ರಂದು ಬೆಂಗಳುರಿನ ಬೊಮ್ಮನಹಳ್ಳಿಯಲ್ಲಿ ಈತನನ್ನು ಬಂಧಿಸಲಾಗಿದೆ. ಈತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

2015ರ ಮೇ 12ರಂದು ಬಾಂಗ್ಲಾದ ಸಿಲೆಟ್ ಎಂಬಲ್ಲಿ ವಿಜ್ಞಾನ ಬರಹಗಾರ ಮತ್ತು ಬ್ಲಾಗರ್ ಅನಂತ್ ವಿಜಯ ದಾಸ್ ಎಂಬವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆದು, ಫೈಜಲ್ ಸಹಿತ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈತ ಅಲ್ಲಿಂದ ಪರಾರಿಯಾಗಿ ಭಾರತದಲ್ಲಿ ತಲೆ ಮರೆಸಿಕೊಂಡಿದ್ದ. ಈತನಿಗಾಗಿ ಬಾಂಗ್ಲಾ ಪೊಲೀಸರು ಹುಡುಕಾಟ ನಡೆಸಿದ್ದರು.

ಬಂಧಿತ ಫೈಜಲ್, ಅಲ್ ಕೈದಾ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದುದು ಗೊತ್ತಾಗಿದೆ. ಈತ ಮದರಸಗಳಿಗೆ ತೆರಳಿ ಜಿಹಾದ್‌ ಬಗ್ಗೆ ಪ್ರವಚನ ನೀಡಿ ಮುಸ್ಲಿಂ ಯುವಕರನ್ನು ಕೆರಳಿಸುತ್ತಿದ್ದ. ಫೈಜಲ್ ಭಾರತದಲ್ಲಿ ಇರುವ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಜೂನ್‌ನಲ್ಲಿ ಮಾಹಿತಿ ದೊರೆತಿತ್ತು. ಈ ಮಾಹಿತಿಯನ್ನು ಕೋಲ್ಕತ್ತಾ ಪೊಲೀಸರಿಗೆ ಬಾಂಗ್ಲಾ ಪೊಲೀಸರು ರವಾನಿಸಿದ್ದರು. ಕೋಲ್ಕತ್ತಾ ಪೊಲೀಸರ ತನಿಖೆ ವೇಳೆ ಫೈಜಲ್ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು.

ಫೈಜಲ್ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿ ತನಗೆ ವಾಸಕ್ಕೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಪಾಸ್‌ಪೋರ್ಟ್‌ಗೆ ಮಿಜೋರಾಂನ ವಿಳಾಸ, ವೋಟರ್ ಐಡಿಗೆ ಅಸ್ಸಾಂನ ವಿಳಾಸ, ಡ್ರೈವಿಂಗ್ ಲೈಸೆನ್ಸ್‌ಗೆ ಬೆಂಗಳೂರು ವಿಳಾಸ ಬಳಸಿಕೊಂಡಿದ್ದ.

ಇದನ್ನೂ ಓದಿ: Amravati murder: ಕೆಮಿಸ್ಟ್‌ ಕೊಲ್ಹೆ ಕೊಲೆಯ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

Exit mobile version