ಗಾಂಧಿನಗರ: ಗ್ರಾಹಕರಿಗೆ ತಿಳಿಯದಂತೆ ಗೋಮಾಂಸ ಸೇರಿಸಿದ ಸಮೋಸಾ (Beef Samosa)ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 6 ಮಂದಿಯನ್ನು ಗುಜರಾತ್‌ನ ವಡೋದರಾದಲ್ಲಿ ಬಂಧಿಸಲಾಗಿದೆ. ನಿಖರ ಮಾಹಿತಿ ಪಡೆದ ಪೊಲೀಸರು ಶನಿವಾರ (ಏಪ್ರಿಲ್ 6) ಚಿಪ್ವಾಡ್ ಪ್ರದೇಶದಲ್ಲಿರುವ ಪ್ರಸಿದ್ಧ ‘ಹುಸೈನಿ ಸಮೋಸಾ’ ಅಂಗಡಿಯ ಮೇಲೆ ದಾಳಿ ನಡೆಸಿ ಗೋಮಾಂಸ ತುಂಬಿದ್ದ ನೂರಾರು ಕಿಲೋಗ್ರಾಂ ಸಮೋಸಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಮಳಿಗೆ ಮಾಲೀಕರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ
ಸಮೋಸಾ ಒಳಗೆ ಗೋಮಾಂಸವನ್ನು ಸೇರಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ಜತೆ ಸ್ಥಳಕ್ಕೆ ಆಗಮಿಸಿದ್ದ ವಿಧಿ ವಿಜ್ಞಾನ ತಜ್ಞರು ಸಮೋಸಾ ಮಾದರಿಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಪರೀಕ್ಷಾ ವರದಿ ಹೊರ ಬಿದ್ದಿದ್ದು, ಸಮೋಸಾ ಒಳಗೆ ಗೋಮಾಂಸ ಸೇರ್ಪಡೆಯಾಗಿರುವುದು ದೃಢಪಟ್ಟಿದೆ. ಹೀಗಾಗಿ ಶನಿವಾರ ವಶಕ್ಕೆ ಪಡೆದಿದ್ದ 6 ಅರೋಪಿಗಳನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.
ಬಂಧಿತರು
ಬಂಧಿತರನ್ನು ಮಳಿಗೆಯ ಮಾಲೀಕರಾದ ಯೂಸೂಫ್ ಶೇಖ್, ನಯೀಮ್ ಶೇಖ್, ನಾಲ್ವರು ಕಾರ್ಮಿಕರಾದ ಹನೀಫ್ ಭತಿಯಾರಾ, ದಿಲ್ವರ್ ಪಠಾಣ್, ಮೊಯಿನ್ ಹಬ್ದಲ್ ಹಾಗೂ ಮೊಬಿನ್ ಶೇಖ್ ಎಂದು ಗುರುತಿಸಲಾಗಿದೆ. ʼʼಆರೋಪಿಗಳು ಮಾಂಸ ಬೆರೆಸಿದ ಸಮೋಸಾ ತಯಾರು ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಗೋಮಾಂಸ ಸೇರಿಸಿದ ಸಮೋಸಾ ಎಂದು ಬಹಿರಂಗ ಮಾಡಿರಲಿಲ್ಲ. ಇವರು ಇಲ್ಲಿ ಮಾರಾಟ ಮಾಡುತ್ತಿದ್ದುದು ಮಾತ್ರವಲ್ಲ ನಗರದ ವಿವಿಧೆಡೆಗೆ ರವಾನಿಸುತ್ತಿದ್ದರುʼʼ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ನಗರದಾದ್ಯಂತ ಅನೇಕರು ಇದನ್ನು ಗೋಮಾಂಸದ ಸಮೋಸಾ ಎಂದು ತಿಳಿಯದೆ ಸೇವಿಸಿದ್ದಾರೆ. “ಮಾಲೀಕರು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಹಸಿ ಸಮೋಸಾಗಳನ್ನು ತಯಾರಿಸಿ ನಗರದಾದ್ಯಂತ ಇರುವ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಅಲ್ಲಿ ಅವುಗಳನ್ನು ಕರಿದು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು” ಎಂದು ಡಿಸಿಪಿ ಪನ್ನಾ ಮೊಮಾಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳು 5 ಅಂತಸ್ತಿನ ಕಟ್ಟಡದಲ್ಲಿ ಸಮೋಸಾ ತಯಾರಿಸುತ್ತಿದ್ದರು. ಈ ಪೈಕಿ ಒಂದು ಮಹಡಿಯನ್ನು ಫ್ರೀಜರ್ ಕೊಠಡಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಇಲ್ಲಿಯೇ ದನದ ಮಾಂಸವನ್ನು ಸಂಗ್ರಹ ಮಾಡಿ ಇಡುತ್ತಿದ್ದರು ಎನ್ನಲಾಗಿದೆ. ಬಂಧಿತರಲ್ಲಿ ಒಬ್ಬನಾದ ಯೂಸುಫ್ ಶೇಖ್ ವಿಚಾರಣೆಯ ವೇಳೆ, ತನ್ನ ತಂದೆ ಸಮೋಸಾ ಮಾರಾಟ ಮಾಡುತ್ತಿದ್ದರು ಮತ್ತು ಇದೀಗ ತಾನೂ ಈ ವ್ಯವಹಾರಕ್ಕೆ ಸೇರಿಕೊಂಡೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಮೋಸಾ ತಯಾರಿಕೆಗೆ ಈ ಆರೋಪಿಗಳು ಅನುಮತಿ ಪಡೆದಿರಲಿಲ್ಲ ಎನ್ನುವ ಮಾಹಿತಿಯೂ ತನಿಖೆ ವೇಳೆ ಬಹಿರಂಗಗೊಂಡಿದೆ.
ಇದನ್ನೂ ಓದಿ: Gobi Manchurian: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತಿಲ್ಲ; ಕಾರಣವೇನು?
ʼʼಆರೋಪಿಗಳು ಗೋಮಾಂಸ ಮಿಶ್ರಿತ ಸಮೋಸಾಗಳನ್ನು ಎಷ್ಟು ಸಮಯದಿಂದ ಮಾರಾಟ ಮಾಡುತ್ತಿದ್ದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆʼʼ ಎಂದು ಮೊಮಾಯಾ ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾಂಸದ ಸಮೋಸಾ ತಯಾರಿಸುವಾಗ ಅದಕ್ಕೆ ಕುರಿ ಅಥವಾ ಮೇಕೆಯ ಮಾಂಸ ಬಳಸಲಾಗುತ್ತದೆ. ಆದರೆ ಅವುಗಳು ಈಗ ದುಬಾರಿ. ಹೀಗಾಗಿ ಹಸು, ಎಮ್ಮೆಗಳ ಮಾಂಸವನ್ನು ಬೆರೆಸಿ ಆರೋಪಿಗಳು ಅದರಲ್ಲಿ ಸಮೋಸಾ ತಯಾರಿಸುತ್ತಿದ್ದರು ಎನ್ನಲಾಗಿದೆ. ಅವರು ಯಾರಿಗೂ ಗೊತ್ತಾಗದಂತೆ ಗೋಮಾಂಸವನ್ನು ತರುತ್ತಿದ್ದರು ಎನ್ನುವುದೂ ತನಿಖೆ ವೇಳೆ ತಿಳಿದು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ