Site icon Vistara News

Bhavani Revanna: ಭವಾನಿ ರೇವಣ್ಣ‌ ನಿರಾಳ, ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

bhavani revanna bail

ಬೆಂಗಳೂರು: ಕೆಆರ್ ನಗರದಲ್ಲಿ ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯನ್ನು ಕಿಡ್ನಾಪ್ (kidnap case) ಮಾಡಿದ ಪ್ರಕರಣದಲ್ಲಿ ಎಸ್‌ಐಟಿ (SIT) ವಿಚಾರಣೆ ಎದುರಿಸುತ್ತಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು (Anticipatory Bail) ದೊರೆತಿದೆ.

ಕಳೆದ ವಾರ ಕಿಡ್ನಾಪ್‌ ಕೇಸ್‌ನಲ್ಲಿ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಿಂದ ಆದೇಶ ಪ್ರಕಟವಾಗಿದ್ದು, ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಇಂದು ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಪೀಠ ಪ್ರಕಟಿಸಿದೆ.

“ಪೊಲೀಸರು ಮುಂದಿಟ್ಟ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರವನ್ನೇ ಕೊಡಬೇಕೆಂದಿಲ್ಲ” ಎಂದು ಕೋರ್ಟ್‌ ಪೀಠ ಹೇಳಿದೆ. “ಸಂತ್ರಸ್ತೆಗೆ ಭವಾನಿ ಊಟ, ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನೂ ಒಪ್ಪಲಾಗುವುದಿಲ್ಲ. ಅಕ್ಕ ಬಟ್ಟೆ ಊಟ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ” ಎಂದೂ ಕೋರ್ಟ್‌ ಗಮನಿಸಿದೆ.

ಆದರೆ, ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಹೈಕೋರ್ಟ್ ವಿಧಿಸಿದೆ. ತನಿಖೆಗೆ ಎಸ್‌ಐಟಿಗೆ ಸಹಕರಿಸಬೇಕು ಎಂದು ಆದೇಶಿಸಿದೆ. ಮಾಜಿ ಸಚಿವ ರೇವಣ್ಣ ಅವರಿಗೂ ದೇಶ ಬಿಟ್ಟು ಹೊರಹೋಗಬಾರದು ಎಂಬ ಆದೇಶ ವಿಧಿಸಲಾಗಿತ್ತು.

ಎರಡು ವಾರದ ಹಿಂದೆ, ಹೈಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿದ್ದರು. ಅಲ್ಲಿಯವರೆಗೂ ಭವಾನಿ ತಲೆಮರೆಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.

ʼʼಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರನ್ನು ಅಪಹರಣ ಮಾಡಿಸಿಲ್ಲ. ಆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರೋ ಸಂಚು ರೂಪಿಸಿದ್ದು, ಇದರ ಭಾಗವಾಗಿ ಈ ಆರೋಪ ಹೊರಿಸಲಾಗುತ್ತಿದೆʼʼ ಎಂದು ಭವಾನಿ ರೇವಣ್ಣ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ.

ಇಂದೇ ಮತ್ತೊಮ್ಮೆ ಪ್ರಜ್ವಲ್‌ ರೇವಣ್ಣ ಕಸ್ಟಡಿಗೆ

ಇನ್ನೊಂದೆಡೆ, ಪ್ರಜ್ವಲ್‌ ರೇವಣ್ಣ (Prajwal Revanna case) ಅವರ ಕಸ್ಟಡಿಯೂ ಇಂದೇ ಮುಕ್ತಾಯವಾಗುತ್ತಿದ್ದು, ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ ಮತ್ತೊಮ್ಮೆ ಕಸ್ಟಡಿಗೆ ಪಡೆಯಲು ಎಸ್‌ಐಟಿ ಮುಂದಾಗಿದೆ. ಈಗಾಗಲೇ ಎರಡೆರಡು ಬಾರಿ ಪ್ರಜ್ವಲ್‌ ರೇವಣ್ಣ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದಾರೆ. ಕೋರ್ಟ್‌ಗೆ ಮನವರಿಕೆ ಮಾಡಿ, ಪ್ರಜ್ವಲ್ ವಿರುದ್ಧದ ಎರಡು ಪ್ರಕರಣಗಳ ತನಿಖೆಯನ್ನು ಎಸ್ಐಟಿ ಮುಗಿಸಿದೆ. ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಬಹುತೇಕ ಪೂರ್ಣವಾಗಿದೆ.

ಇಂದು ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಪ್ರಜ್ವಲ್ ರೇವಣ್ಣನನ್ನು ಕೋರ್ಟ್‌ಗೆ ಎಸ್ಐಟಿ ಹಾಜರುಪಡಿಸಲಿದೆ. ಸಿಐಡಿಯಲ್ಲಿ ದಾಖಲಾಗಿರುವ ರೇಪ್ ಕೇಸಿನಲ್ಲಿ ಇನ್ನಷ್ಟು ತನಿಖೆ ಅಗತ್ಯವಾಗಿರುವ ಕಾರಣ ಮತ್ತೆ ಬಾಡಿ ವಾರೆಂಟ್ ಮೇಲೆ ಪ್ರಜ್ವಲ್ ರೇವಣ್ಣ ಕಸ್ಟಡಿಗೆ ಪಡೆಯಲು ಎಸ್‌ಐಟಿ ಕೋರ್ಟ್‌ಗೆ ಮನವಿ ಮಾಡಲಿದೆ.

ಪ್ರತಿಯೊಂದು ಪ್ರಕರಣದಲ್ಲಿಯೂ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಒಟ್ಟು ಮೂರು ಪ್ರಕರಣಗಳಿದ್ದು, ಒಂದು ಪ್ರಕರಣ ಮುಗಿದ ಬೆನ್ನಲ್ಲೆ ಮತ್ತೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ‌ ವಿರುದ್ಧ ಪ್ರಬಲ ಸಾಕ್ಷ್ಯಗಳ ಸಂಗ್ರಹಕ್ಕೆ ಎಸ್ಐಟಿ ಹರಸಾಹಸ ಪಡುತ್ತಿದೆಯಾದರೂ, ಅದು ಸಾಧ್ಯವಾಗಿಲ್ಲ. ಎಸ್‌ಐಟಿ ವಶದಲ್ಲಿರುವ ಅಶ್ಲೀಲ ವಿಡಿಯೋಗಳಲ್ಲಿ ಪ್ರಜ್ವಲ್‌ ಮುಖ ಕಾಣಿಸುತ್ತಿಲ್ಲ. ಹಲವಾರು ಮಹಿಳೆಯರ ಜೊತೆಗಿನ ಲೈಂಗಿಕ ಕ್ರಿಯೆಗಳು ದಾಖಲಾಗಿವೆಯಾದರೂ, ಅವರಲ್ಲಿ ಯಾರೂ ದೂರು ನೀಡಿಲ್ಲ. ಪ್ರಜ್ವಲ್‌ ಮನೆಯಲ್ಲಿ ನಡೆದ ಮಹಜರು ವೇಲೆ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಸಂಸದರ ವಿರುದ್ಧ ನಿಲ್ಲಬಹುದಾದ ಮಹತ್ವದ ಸಾಕ್ಷಿಗಳು ದೊರೆತಿಲ್ಲ.

ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!

Exit mobile version