Site icon Vistara News

Bitcoin Scam : ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದ ಬಿಟ್‌ ಕಾಯಿನ್‌ ಹಗರಣದ ತನಿಖೆ ಚುರುಕು; 3 ಆರೋಪಿಗಳ ಮನೆಗೆ ದಾಳಿ

bitcoin sriki

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ, ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದ ಬಿಟ್ ಕಾಯಿನ್ ಹಗರಣದ (Bitcoin Scam) ತನಿಖೆ ಮತ್ತೆ ಚುರುಕುಗೊಂಡಿದೆ. ಎಸ್​ಐಟಿ ಅಧಿಕಾರಿಗಳು (SIT officials) ಮಂಗಳವಾರ ಬೆಳಗ್ಗೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ (Srikrishna alias Sreeki), ಸುನೀಶ್‌ ಹೆಗ್ಡೆ ಮತ್ತು ಪ್ರಸಿದ್ಧ್‌ ಅವರ ನಿವಾಸಗಳಿಗೆ ದಾಳಿ (Houses raided) ಮಾಡಿ ಪರಿಶೀಲನೆ ನಡೆಸಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದ ವಿಶೇಷ ತನಿಖಾ ದಳ- ಎಸ್‌ಐಟಿ (Special Investigation team- SIT) ಸೋಮವಾರ ಕೋರ್ಟ್‌ನಿಂದ ಸರ್ಚ್‌ ವಾರಂಟ್‌ ಪಡೆದಿತ್ತು. ಮಂಗಳವಾರ ಮುಂಜಾನೆಯೇ ಅದರು ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ ಮನೆ, ಸದಾಶಿವನಗರದಲ್ಲಿರುವ ಸುನೀಶ್​ ಹೆಗ್ಡೆ ಮತ್ತು ಪ್ರಸಿದ್ಧ್‌ ಮನೆಗಳಿಗೆ ದಾಳಿ ಮಾಡಿದೆ.

ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ಕೆಲವು ಬಿಜೆಪಿ ನಾಯಕರ ಹೆಸರು ಕೇಳಿಬಂದಿತ್ತು. ಹಿಂದಿನಿಂದಲೂ ಕಾಂಗ್ರೆಸ್‌ ಈ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿಕೊಂಡು ಬಂದಿತ್ತು. ಅಧಿಕಾರಕ್ಕೆ ಬಂದ ಮೇಲೆ ತನಿಖೆಗಾಗಿ ಮನೀಷ್‌ ಕರ್ಬಿಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿತ್ತು.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಆದರೆ, ಸಿಸಿಬಿ ಅಧಿಕಾರಿಗಳು ವಾರೆಂಟ್ ಇದ್ದರೂ ಆರೋಪಿಗಳ ಮನೆಯಲ್ಲಿ ಪರಿಶೀಲನೆ ನಡೆಸಿಲ್ಲ ಎಂಬ ಆರೋಪವಿತ್ತು. ಕಾಂಗ್ರೆಸ್‌ ಸರ್ಕಾರ ಇದರ ಬಗ್ಗೆ ಮರು ತನಿಖೆಗೆ ಆದೇಶ ನೀಡಿ ಅದನ್ನು ಎಸ್‌ಐಟಿಗೆ ವಹಿಸಿತ್ತು. ಎಸ್‌ಐಟಿ ಅಧಿಕಾರಿಗಳು ಆರಂಭದಲ್ಲೇ ಸಿಸಿಬಿ ತಂಡದಲ್ಲಿದ್ದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.

ಇದೀಗ ಎಸ್‌ಐಟಿ ತಂಡ ಚುರುಕಾಗಿ ಕೆಲಸ ಮಾಡುವ ಲಕ್ಷಣ ತೋರಿಸಿದ್ದು, ಮೊದಲ ಹಂತವಾಗಿ ಮನೆಗಳಿಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ. ಆದರೆ, ಆರೋಪಿಗಳು ಇಷ್ಟು ಹೊತ್ತಿಗೆ ಯಾವುದೇ ಸಾಮಾನ್ಯ ದಾಖಲೆಗಳನ್ನು ಇಟ್ಟುಕೊಂಡಿರುವ ಸಾಧ್ಯತೆಗಳು ಇಲ್ಲ.

ಬಿಟ್‌ ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳ ಸೂಕ್ಷ್ಮ ಹಗರಣವನ್ನು ತನಿಖೆ ನಡೆಸುವುದು ನಮ್ಮ ತನಿಖಾ ಸಂಸ್ಥೆಗಳಿಗೆ ಸುಲಭವಲ್ಲ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ತಂತ್ರಜ್ಞಾನದ ವಿಚಾರದಲ್ಲಿ ಇಸ್ರೇಲ್‌ ದೇಶದ ಸಹಾಯ ಪಡೆಯುವ ಚಿಂತನೆ ನಡೆದಿದೆ. ನಮ್ಮಲ್ಲಿ ಕ್ರಿಪ್ಟೋ ಕರೆನ್ಸಿ ವಾಲೇಟ್​ಗಳನ್ನ ಫ್ರೀಜ್ ಮಾಡುವ ತಂತ್ರಜ್ಞಾನವೂ ಬೆಳೆದಿಲ್ಲ.

ಇದನ್ನೂ ಓದಿ: Bitcoin Scam: ಬಿಟ್‌ಕಾಯಿನ್ ಹಗರಣ ತನಿಖೆಗೆ ಇಸ್ರೇಲ್ ನೆರವು ಕೇಳಲು ಮುಂದಾದ ಎಸ್ಐಟಿ ಟೀಂ

ಏನಿದು ಬಿಟ್‌ ಕಾಯಿನ್‌ ಹಗರಣ?

2019ರಲ್ಲಿ ರಾಜ್ಯ ಸರ್ಕಾರದ ಪ್ರೊಕ್ಯೂರ್‌ಮೆಂಟ್‌ ವಿಭಾಗದಿಂದ 11.5 ಕೋಟಿ ರೂ. ಕಳವಾಗಿತ್ತು. ಕಳವು ಎಂದರೆ ಕರೆನ್ಸಿ ಕಳವಲ್ಲ. ಪ್ರೊಕ್ಯೂರ್‌ಮೆಂಟ್‌ ವಿಭಾಗದ ಡಿಜಿಟಲ್‌ ವ್ಯವಸ್ಥೆಯನ್ನು ಹ್ಯಾಕ್‌ ಮಾಡಿ ಅದರಲ್ಲಿದ್ದ ಹಣವನ್ನು ಬೇರೆ ಬೇರೆ ಕಂಪನಿಗಳಿಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಮಾಡಿದ್ದು ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಎಂಬ ಕುಖ್ಯಾತ ಹ್ಯಾಕರ್‌ ಎಂಬುದು 2020ರಲ್ಲಿ ಆತ ಇನ್ನೊಂದು ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ಬಯಲಾಗಿತ್ತು.

ಹಣವನ್ನು ಪ್ರೊಕ್ಯೂರ್‌ಮೆಂಟ್‌ ಖಾತೆಯಿಂದ ಬೇರೆ ಖಾತೆಗೆ ವರ್ಗಾವಣೆ ಮಾಡುವುದು, ಯಾರಿಗೆ ವರ್ಗಾವಣೆ ಮಾಡುತ್ತೇವೋ ಅವರಿಗೆ ಸ್ವಲ್ಪ ಕಮಿಷನ್‌ ನೀಡಿ ಬಿಟ್‌ ಕಾಯಿನ್‌ ಮೂಲಕ ತಮ್ಮ ಖಾತೆಗೆ ಪಡೆಯುವುದು ಅವರು ಮಾಡಿಕೊಂಡ ತಂತ್ರ. ಶ್ರೀಕಿ ಮತ್ತು ಅವನ ಸಹಚರರಾದ ಸುನೀಶ್‌ ಹೆಗ್ಡೆ, ಹೇಮಂತ್‌ ಮುದ್ದಪ್ಪ ಮತ್ತು ಪ್ರಸಿದ್ಧ್‌ ಶೆಟ್ಟಿ ಅವರು ನಿಧಿಯನ್ನು ವರ್ಗಾವಣೆ ಮಾಡಿ ಹಣವನ್ನು ಪಡೆಯುವ ಒಂದು ಲೇವಾದೇವಿ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದರು. ಅವರು ನಿಮ್ಮಿ ಎಂಟರ್‌ಪ್ರೈಸಸ್‌, ನಾಗಪುರದ ಉದಯ ಗ್ರಾಮ ವಿಕಾಸ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳಿಗೆ ನಿಧಿ ವರ್ಗಾವಣೆ ಮಾಡಿದ್ದು, ಬಳಿಕ ಹವಾಲಾ ರೂಪದಲ್ಲಿ ಕರೆನ್ಸಿಯನ್ನು ಕೂಡಾ ಪಡೆದಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಮರಳಿ ಪಡೆಯಲಾಗಿದೆ. ಆದರೆ, ಹೆಚ್ಚಿನ ವ್ಯವಹಾರ ಬಿಟ್‌ ಕಾಯಿನ್‌ ರೂಪದಲ್ಲಿ ನಡೆದಿರುವುದರಿಂದ ಅದರ ಆಳ ಅಗಲ ಪತ್ತೆ ಹಚ್ಚಲು ತನಿಖಾಧಿಕಾರಿಗಳಿಗೇ ಕಷ್ಟವಾಗುತ್ತಿದೆ.

Exit mobile version