ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಸಮುದಾಯಾಧಾರಿತವಾಗಿ ಟೀಕೆ ಮಾಡುವ ಸಂಬಂಧ ಬಿಜೆಪಿಯ (BJP Karnataka) ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದ ಮೊಟ್ಟೆ ವಿಡಿಯೊ ಈಗ ಮತ್ತೆ ಸುದ್ದಿಯಲ್ಲಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda), ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯಾ (Amit Malaveya) ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಹೈ ಗ್ರೌಂಡ್ಸ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ಮೊಟ್ಟೆ ವಿಡಿಯೊ ವಿಚಾರವಾಗಿ ಮೇ 5 ರಂದು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲು ಮಾಡಿತ್ತು. ಇದೀಗ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಜೆ.ಪಿ. ನಡ್ಡಾ, ಬಿ.ವೈ. ವಿಜಯೇಂದ್ರ ಹಾಗೂ ಅಮಿತ್ ಮಾಳವೀಯಾ ಅವರಿಗೆ ನೋಟಿಸ್ ನೀಡಿರುವ ಹೈ ಗ್ರೌಂಡ್ಸ್ ಪೊಲೀಸರು, ನೋಟಿಸ್ ತಲುಪಿದ 7 ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಸಮುದಾಯಗಳಿಗೆ ಸಂಬಂಧಿಸಿದಂತೆ ಈ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಸ್ಲಿಂ ಎಂಬಂತೆ ಬಿಂಬಿಸಿ ಮೊಟ್ಟೆಯಲ್ಲಿ ಬರುವ ಮರಿಗಳನ್ನು ಬೇರೆ ಬೇರೆ ಸಮುದಾಯಗಳಿಗೆ ಹೋಲಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊದ ಆರಂಭದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೀಸಲಾತಿಯ ಬುಟ್ಟಿಯಲ್ಲಿರುವ ಮೊಟ್ಟೆಗಳು ಎಂಬಂತೆ ಚಿತ್ರಿಸಲಾಗಿದೆ. ಬಳಿಕ ಈ ಮೀಸಲಾತಿ ಬುಟ್ಟಿಯಲ್ಲಿ ರಾಹುಲ್ ಗಾಂಧಿಯನ್ನು ಹೋಲುವ ಅನಿಮೇಟೆಡ್ ಪಾತ್ರ ಮುಸ್ಲಿಂ ಸಮುದಾಯದ ಮತ್ತೊಂದು ಮೊಟ್ಟೆಯನ್ನು ಇಡುವಂತೆ ತೋರಿಸಲಾಗಿದೆ. ಬಳಿಕ ಮೊಟ್ಟೆ ಬಿರಿದು ಪಕ್ಷಿಗಳು ಜೀವ ತಳೆಯುತ್ತವೆ. ಆಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರನ್ನು ಹೋಲುವ ಪಾತ್ರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತವೆ. ಬಳಿಕ ಬಲಿಷ್ಠವಾಗುವ ಮುಸ್ಲಿಮರನ್ನು ಹೋಲುವ ಹಕ್ಕಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಬುಟ್ಟಿಯಿಂದ ಹೊರದಬ್ಬುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿಪಿ ನೇಮಕ; ರಾಜ್ಯ ಸರ್ಕಾರದ ಮಹತ್ವದ ಆದೇಶ
ನೀತಿ ಸಂಹಿತೆಯ ಉಲ್ಲಂಘನೆ
“ಈ ವಿಡಿಯೊದಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಹಣವನ್ನು ನೀಡುವಂತೆ ಮತ್ತು ಮುಸ್ಲಿಂ ಸಮುದಾಯವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ಹೊರ ಹಾಕುವಂತೆ ಬಿಂಬಿಸಲಾಗಿದೆ” ಎಂದು ರಮೇಶ್ ಬಾಬು ಆರೋಪಿಸಿದ್ದರು. ʼʼಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲ 1989ರ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವೂ ಹೌದುʼʼ ಎಂದು ಹೇಳಿದ್ದಾರೆ. ಇಂತಹ ವಿಡಿಯೊಗಳು ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಸಾಧ್ಯತೆ ಇದೆ. 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದರು.