Site icon Vistara News

BJP Leader Murder: ಉತ್ತರಪ್ರದೇಶದಲ್ಲಿ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ, ವಿಡಿಯೊ ಇಲ್ಲಿದೆ

bjp leader murder

ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾರತೀಯ ಜನತಾ ಪಕ್ಷದ ನಾಯಕನೊಬ್ಬನನ್ನು ಆತನ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ (BJP Leader Murder) ಮಾಡಲಾಗಿದೆ. ಮೃತ ವ್ಯಕ್ತಿ 30 ವರ್ಷದ ಅನುಜ್ ಚೌಧರಿ.

ಚೌಧರಿ ಅವರು ಮೊರಾದಾಬಾದ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ ಹೊರಗೆ ವಾಕಿಂಗ್‌ ಮಾಡುತ್ತಿದ್ದಾಗ ಮೋಟಾರು ಸೈಕಲ್‌ಗಳಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

“ಸಂತ್ರಸ್ತರ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ. ಅಮಿತ್ ಚೌಧರಿ ಮತ್ತು ಅನಿಕೇತ್ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಮೊರಾದಾಬಾದ್‌ನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಎಸ್‌ಪಿ) ಹೇಮರಾಜ್ ಮೀನಾ ಹೇಳಿದ್ದಾರೆ.

ಚೌಧರಿ ಅವರು ಸಂಭಾಲ್‌ನ ಅಸ್ಮೋಲಿ ಬ್ಲಾಕ್‌ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಗೆದ್ದಿರಲಿಲ್ಲ. ಕೊಲೆಗೆ ರಾಜಕೀಯ ಪ್ರತಿಸ್ಪರ್ಧಿಗಳೇ ಕಾರಣ ಎಂದು ಚೌಧರಿ ಕುಟುಂಬ ಆರೋಪಿಸಿದೆ. ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ. “ಎರಡು ಪಾರ್ಟಿ ನಡುವೆ ವೈಯಕ್ತಿಕ ಪೈಪೋಟಿ ಇತ್ತು. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ವಕೀಲರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಭಾನುವಾರ ಸಂಜೆ ಸುಲ್ತಾನ್‌ಪುರ ಜಿಲ್ಲೆಯ ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಕೀಲ ಆಜಾದ್ ತನ್ನ ಸಹೋದರ ಮುನವ್ವರ್ ಜತೆ ಟೀ ಸ್ಟಾಲ್‌ನಲ್ಲಿದ್ದಾಗ ಎಸ್‌ಯುವಿಯಲ್ಲಿ ಬಂದ ಅಪರಿಚಿತರ ಗುಂಪು ಅವರ ಮೇಲೆ ಗುಂಡು ಹಾರಿಸಿತ್ತು.

ಇದನ್ನೂ ಓದಿ: Murder Case: ರೀಲ್ಸ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು; ಗಂಡನಿಂದ ಕೊಲೆ, ಹೆಣ ಸಾಗಿಸಿದ ತಂದೆ!

Exit mobile version