Site icon Vistara News

Blast in Bengaluru: ರಾಮೇಶ್ವರಂ ಕೆಫೆ – ಮಂಗಳೂರು ಬ್ಲಾಸ್ಟ್‌ಗೆ ಸಾಮ್ಯತೆ; ಇಲ್ಲ ಅಂದ್ರು ಸಿಎಂ, ಇದೆ ಅಂದ್ರು ಡಿಸಿಎಂ!

Blast in Bengaluru DK Shivakumar says Rameswaram Cafe blast has similarities with Mangaluru case

ಬೆಂಗಳೂರು: ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣ (Blast in Bengaluru) ಸಂಬಂಧ ಬೆಂಗಳೂರಿಗರು ಗಾಬರಿ ಮಾಡಿಕೊಳ್ಳುವಂಥ ಪರಿಸ್ಥಿತಿ ಇಲ್ಲ. ಲೋಕಲ್‌ನಲ್ಲಿ ತಯಾರು ಮಾಡಿದ ಬಾಂಬ್‌ ಇದಾಗಿದ್ದು, ಕಡಿಮೆ ತೀವ್ರತೆಯಲ್ಲಿ ಬ್ಲಾಸ್ಟ್ ಆಗಿದೆ. ಹೀಗಾಗಿ 8-10 ಅಡಿಯಲ್ಲಿ ಎಫೆಕ್ಟ್ ಆಗಿದೆ. ಇನ್ನು ಈ ವಿಚಾರದಲ್ಲಿ ಬಿಜೆಪಿಯವರ ಸಹಕಾರ ನಮಗೆ ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೆ, ಮಂಗಳೂರು ಬ್ಲಾಸ್ಟ್‌ಗೂ ಇದಕ್ಕೂ ಸಾಮ್ಯತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಅದಕ್ಕೂ ಇದಕ್ಕೂ ಸಾಮ್ಯತೆ ಇಲ್ಲ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಮಂಗಳೂರು ಬ್ಲಾಸ್ಟ್‌ಗೂ ಇದಕ್ಕೂ ಸಾಮ್ಯತೆ ಕಾಣಿಸುತ್ತಿದೆ. ನಮ್ಮ ಪೊಲೀಸ್ ಆಫೀಸರ್ ಹೇಳುವ ಪ್ರಕಾರ ಬ್ಲಾಸ್ಟ್‌ಗೆ ಬಳಸಿರುವ ಮೆಟೀರಿಯಲ್‌ಗಳು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆದ ಬ್ಲಾಸ್ಟ್‌ನಲ್ಲಿ ಸಾಮ್ಯತೆ ಇದೆ. ಟೈಮರ್‌ಗೆ ಬಳಸಿರುವ ವಸ್ತು, ಬ್ಲಾಸ್ಟ್‌ಗೆ ಬಳಸಿರುವ ವಸ್ತುಗಳಲ್ಲಿ ಸಾಮ್ಯತೆ ಇದೆ. ಮಂಗಳೂರಿನ ಪೊಲೀಸ್ ಆಫೀಸರ್‌ಗಳು, ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಕೂಡ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೊಮ್ಮೆ ಸ್ಕೂಲ್‌ಗಳಿಗೆ ಬೆದರಿಕೆ ಮೇಲ್ ಬಂದಾಗ ಬ್ಲಾಸ್ಟ್ ಮುನ್ಸೂಚನೆ ಸಿಕ್ಕಿತ್ತಲ್ಲವೇ? ಈಗ ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬೆಂಗಳೂರು ದೊಡ್ಡ ನಗರವಾಗಿದೆ. ಬಿಜೆಪಿ ಸರ್ಕಾರದಲ್ಲಿ ಮಂಗಳೂರು, ಶಿವಮೊಗ್ಗದಲ್ಲಿ ಬಾಂಬ್‌ ಬ್ಲಾಸ್ಟ್‌ ನಡೆದಿತ್ತು. ಪಾರ್ಲಿಮೆಂಟ್‌ನಲ್ಲೂ ದಾಳಿ ಆಗಿರಲಿಲ್ಲವೇ? ಕೆಲವು ಸಂದರ್ಭದಲ್ಲಿ ಯಾರನ್ನೂ ದೂರುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಆರೋಪಿ ಕಾಮನ್ ಮ್ಯಾನ್ ರೀತಿಯಲ್ಲಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾನೆ. ಯಾರು ಇಂತಹ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂದು ಹೇಳುವುದು ಕಷ್ಟ ಆಗುತ್ತದೆ. ಹಾಗಾಗಿ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಮಾಡುತ್ತಿದ್ದೇವೆ. ನನ್ನ ಪ್ರಕಾರ ಎಲ್ಲ ಆ್ಯಂಗಲ್‌ನಲ್ಲೂ ಆರೋಪಿಯ ಚಹರೆ ಸಿಕ್ಕಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಬಿಎಂಪಿಯಿಂದ ಪರಿಹಾರ

ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಏನೇ ಪರಿಹಾರ ಕೊಡುವುದಿದ್ದರೂ ಬಿಬಿಎಂಪಿಯಿಂದ ಕೊಡುತ್ತೇವೆ ಎಂದು ಹೇಳಿದರು.

ಬಿಜೆಪಿ ಸಹಕಾರ ನಮಗೆ ಬೇಡ

ಈ ಬಾಂಬ್‌ ಬ್ಲಾಸ್ಟ್‌ ವಿಚಾರದಲ್ಲಿ ಬಿಜೆಪಿಯವರ ಸಹಕಾರ ನಮಗೆ ಬೇಡ. ಅವರು ಸಪೋರ್ಟ್ ಮಾಡ್ತಿದ್ದಾರೋ? ರಾಜಕಾರಣ ಮಾಡ್ತಾ ಇದ್ದಾರೋ? ಅಂತ ನೋಡುತ್ತಿದ್ದೇವೆ. ಬೆಂಗಳೂರು ಹೆಸರನ್ನು ಹಾಳು ಮಾಡೋಕೆ ಏನೇನು ಬೇಕೋ ಆ ಎಲ್ಲವನ್ನೂ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲ. ನಾನು, ಹೋಂ ಮಿನಿಸ್ಟರ್ ಡಾ. ಜಿ. ಪರಮೇಶ್ವರ್‌ ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಿಜೆಪಿಯವರು ಏನೇ ರಾಜಕೀಯ ಮಾಡಿಕೊಳ್ಳಲಿ, ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ನಮಗೆ ಸಹಕಾರ ಕೊಡುವುದಿದ್ದರೆ ಸರಿ. ರಾಜಕೀಯ ಮಾಡುತ್ತಾರೆ ಎಂದಾದರೆ ರಾಜಕಾರಣ ಮಾಡಿಕೊಳ್ಳಲಿ. ನಾವು ಮಾತ್ರ ಎಲ್ಲ ಆ್ಯಂಗಲ್‌ನಲ್ಲೂ ನೋಡಬೇಕು ಅಂತ ಸೂಚನೆ ಕೊಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಎಲ್ಲವನ್ನೂ ರಿವೀಲ್‌ ಮಾಡಲು ಆಗಲ್ಲ

ಪೊಲೀಸರು ಎಂಟು ತಂಡಗಳನ್ನು ರಚನೆ ಮಾಡಿದ್ದಾರೆ. ಎಲ್ಲ ತಂಡಗಳು ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿವೆ. ಇಡೀ ಬೆಂಗಳೂರು ಸಿಟಿಯಲ್ಲಿ ಕ್ಯಾಮೆರಾಗಳಿವೆ. ಬಸ್ ಹತ್ತಿದ್ದಾನೆ, ಬಸ್ ಇಳಿದಿದ್ದಾನೆ. ವಾಪಸ್ ಹೋಗುವಾಗ ಹೇಗೆ ಹೋದ ಎಂಬುದನ್ನು ಟ್ರೇಸ್ ಮಾಡುತ್ತಿದ್ದಾರೆ. ನಿಮಗೂ ಕೂಡ ಬೇಕಾದಷ್ಟು ಕ್ಲಿಪ್ಪಿಂಗ್ ಸಿಕ್ಕಿದೆ. ಅವುಗಳನ್ನು ನೀವೂ ತೋರಿಸಿದ್ದೀರಿ. ಅವನ ಹೈಟ್ ಏನು? ಹೇಗಿದ್ದಾನೆ? ಅವನ ಚಹರೆಯನ್ನು ಸಹ ತೋರಿಸಿದ್ದೀರಿ. ನಮ್ಮ ಬಳಿ ಕೂಡ ಡೀಟೇಲ್‌ಗಳು ಇವೆ. ಆದರೆ, ಅವುಗಳನ್ನು ಈಗಲೇ ರಿವೀಲ್‌ ಮಾಡಲು ಸಾಧ್ಯವಿಲ್ಲ. ಪೊಲೀಸರಿಗೆ ತನಿಖೆ ಮಾಡಲು ನಾವು ಫ್ರೀ ಹ್ಯಾಂಡ್ ಬಿಟ್ಟಿದ್ದೇವೆ. ಇದು ಏಕವ್ಯಕ್ತಿ ಮಾಡಿರೋದೋ? ಅಥವಾ ಸಂಘಟನೆ ಮಾಡಿರೋದೋ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಮಂಗಳೂರು ಕುಕ್ಕರ್ ಬ್ಲಾಸ್ಟ್‌ಗೆ ಸಾಮ್ಯತೆ ಇಲ್ಲ; ಸಿಎಂ ಸಿದ್ದರಾಮಯ್ಯ

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೂ (Blast in Bengaluru) ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್‌ ಬ್ಲಾಸ್ಟ್‌ಗೂ ಸಾಮ್ಯತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಬಿಜೆಪಿಯವರ ಅವಧಿಯಲ್ಲಾದ ಬಾಂಬ್‌ ಬ್ಲಾಸ್ಟ್‌ಗಳು ಅಲ್ಪಸಂಖ್ಯಾತರ ಓಲೈಕೆಗಾಗಿ ನಡೆದಿದ್ದೇ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್‌ ಇಟ್ಟವನು!

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಾಂಬ್ ಬ್ಲಾಸ್ಟ್ ಆಗಿರುವುದು ನಿಜ. ಮಾಸ್ಕ್, ಟೋಪಿ‌ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್‌ನಲ್ಲಿ ಬಂದಿದ್ದಾನೆ. ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮಂಗಳೂರು ಬಾಂಬ್ ಬ್ಲಾಸ್ಟ್‌ಗೂ ಈ ಬ್ಲಾಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ಈ ಬ್ಲಾಸ್ಟ್ ಮಾಡಿದ್ದನ್ನು ಖಂಡಿಸುತ್ತೇನೆ. ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು‌ ಎಂದು ಹೇಳಿದರು.

Exit mobile version