ಹುಬ್ಬಳ್ಳಿ: ವಿಧಾನಸೌಧದೊಳಗೆ ಪಾಕಿಸ್ತಾನ ಪರ ಘೋಷಣೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಗಮನಿಸಿದರೆ ಕಾಂಗ್ರೆಸ್ ಆಡಳಿತದಲ್ಲಿ ಇಂದು ಉಗ್ರ ಚಟುವಟಿಕೆ ನಡೆಸಲು ಭಯೋತ್ಪಾದಕರಿಗೆ ಕರ್ನಾಟಕವು ಸ್ವರ್ಗವಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನೇರ ಹೊಣೆಗಾರರು ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಶೇ.90ರಷ್ಟು ಉಗ್ರ ಚಟುವಟಿಕೆ ನಿಗ್ರಹವಾಗಿದೆ. ಆದರೆ, ಈಗ ತಮಗೆ ಬೆಂಬಲ ಸಿಗಬಹುದಾದಂತಹ ರಾಜ್ಯಗಳಲ್ಲಿ ಮತ್ತೆ ತಲೆ ಎತ್ತುತ್ತಿದೆ. ಕಾಂಗ್ರೆಸ್ ಆಡಳಿತ ಇರುವುದರಿಂದ ಭಯೋತ್ಪಾದಕರಿಗೆ ದಾಳಿ ನಡೆಸಲು ಇಂದು ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಕೇವಲ ವೋಟ್ ಬ್ಯಾಂಕ್‌ಗಾಗಿ ಕರ್ನಾಟಕವನ್ನು ಉಗ್ರರ ತಾಣವನ್ನಾಗಿ ಮಾಡಬೇಡಿ. ಸಿಎಂ ಸಿದ್ದರಾಮಯ್ಯ ಅವರೇ ಮೊದಲು ಇದನ್ನು ನಿಲ್ಲಿಸಿ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ರಾಜ್ಯದಲ್ಲಿ ಆಡಳಿತ- ಆಂತರಿಕ ಭದ್ರತೆ ವೈಫಲ್ಯ
ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಬಾಂಬ್ ಸ್ಫೋಟ ಎರಡೂ ಘಟನೆ ರಾಜ್ಯದಲ್ಲಿ ಆಡಳಿತ ಮತ್ತು ಆಂತರಿಕ ಭದ್ರತೆ ವೈಫಲ್ಯಕ್ಕೆ ನಿದರ್ಶನವಾಗಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಎನ್ಐಎ ತನಿಖೆಗೆ ವಹಿಸಲು ಪಟ್ಟು
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಗಳನ್ನು ರಾಜ್ಯ ಸರ್ಕಾರವು ಕೂಡಲೇ ಎನ್ಐಎ ತನಿಖೆಗೆ (NIA Investigation) ವಹಿಸಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಎಫ್‌ಎಸ್‌ಎಲ್ ವರದಿ ದೃಢಪಟ್ಟರೂ ಏಕಿಲ್ಲ ಕ್ರಮ?
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಎಫ್‌ಎಸ್‌ಎಲ್ ವರದಿಯಲ್ಲಿ (FSL Report) ದೃಢಪಟ್ಟಿದೆ. ಹಾಗಿದ್ದರೂ ಕ್ರಮ ಕೈಗೊಂಡಿಲ್ಲ ಏಕೆ? ಸಾಲದ್ದಕ್ಕೆ ಮತ್ತಷ್ಟು ವಿಡಿಯೊ ಕಳಿಸಿ ತೀರ್ಮಾನಿಸುತ್ತೇವೆ ಎಂದಿದ್ದೀರಿ. ಅಪರಾಧಿಗಳನ್ನು ಇನ್ನೂ ಎಷ್ಟು ರಕ್ಷಿಸಿಕೊಳ್ಳುತ್ತೀರಿ? ಮಿಸ್ಟರ್ ಸಿಎಂ ಸಿದ್ದರಾಮಯ್ಯ ಎಂದು ಸಚಿವ ಪ್ರಲ್ಹಾದ್ ಜೋಶಿ ತರಾಟೆಗೆ ತೆಗೆದುಕೊಂಡರು.
ರಾಮೇಶ್ವರಂ ಕೆಫೆ ಸ್ಫೋಟವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಎಸ್‌ಡಿಪಿ ಮತ್ತು ಪಿಎಫ್‌ಐ ಮೇಲಿನ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ಅವರ ಪರವಾಗಿ ಇದೆ ಎಂಬ ಸಂದೇಶ ಕೊಟ್ಟ ಪರಿಣಾಮ ಇದೆಲ್ಲವೂ ಆಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಕಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಪರಿಣಾಮ ರಾಜ್ಯದ ಸಾಮಾನ್ಯ ಜನರ ಬದಕು ಅಸುರಕ್ಷಿತವಾಗಿದೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು.
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಗೆ ನಾಚಿಕೆ ಆಗಬೇಕು. ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಕುಮ್ಮಕ್ಕು ನೀಡಿದ್ದಲ್ಲದೆ ಮಾಧ್ಯಮದವರನ್ನೇ ಬೆದರಿಸಿ ಕಳಿಸಿದ್ದಾರೆ ಎಂದು ಸಚಿವ ಜೋಶಿ ಕಿಡಿಕಾರಿದರು.
ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!
ಜಿಹಾದಿ ರಾಜಕಾರಣಕ್ಕೆ ಬೆಂಬಲ ನೀಡಬೇಕೆ?
ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ದೇಶವನ್ನು ಅಭದ್ರ ಮಾಡುತ್ತಿದೆ. ಇಂಥ ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಎಂದು ಪ್ರಶ್ನಿಸಿದ ಜೋಶಿ, ಇದು ಅತ್ಯಂತ ಅಯೋಗ್ಯ ಸರ್ಕಾರ. ಈ ರೀತಿಯ ಚಿಲ್ಲರೆ, ತುಷ್ಟ ರಾಜಕೀಯ ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಲ್ಹಾದ್ ಜೋಶಿ ಆಗ್ರಹಿಸಿದರು.