Site icon Vistara News

bomb Hoax: ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

hotel oterra bomb hoax

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic city) ಪ್ರತಿಷ್ಠಿತ ಹೋಟೆಲ್‌ಗೆ ಇಂದು ಬಾಂಬ್ ಬೆದರಿಕೆ ಮೇಲ್ (Bomb Hoax) ಬಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ (Hotel) ಆವರಣವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ. ಶಾಲೆ, ದೇವಸ್ಥಾನ ಬಳಿಕ ಇದೀಗ ಹೋಟೆಲ್‌ ಬಾಂಬ್‌ ಬೆದರಿಕೆಗೆ ತುತ್ತಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಒಟೇರಾ (Hotel Oterra) ಎಂಬ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಮೇಲ್ ರವಾನೆಯಾಗಿದೆ. ತಡರಾತ್ರಿ 2 ಘಂಟೆಗೆ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿಗಳು ಮೇಲ್ ಚೆಕ್ ಮಾಡುವಾಗ ಕಂಡಿದೆ. ಆಗ ಗಾಬರಿಯಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಟೇರಾ ಹೋಟೆಲ್‌ಗೆ ಎಲೆಕ್ಟ್ರಾನಿಕ್ ಸಿಟಿ ಪೋಲೀಸರು ಭೇಟಿ ನೀಡಿದ್ದು, ಬಾಂಬ್ ಸ್ಕ್ವಾಡ್ ಕರೆಸಿ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಬಾಂಬ್‌ ಕಂಡುಬಂದಿಲ್ಲ. ಮುನ್ನೆಚ್ಚರಿಕೆಯಾಗಿ ತಪಾಸಣೆ ಮುಗಿಯುವವರೆಗೂ ಹೋಟೆಲ್‌ ಆವರಣವನ್ನು ಗ್ರಾಹಕರಿಗೆ ಬಂದ್‌ ಮಾಡಲಾಗಿದೆ.

ಶಾಲೆ, ದೇವಸ್ಥಾನಗಳಿಗೆ ಬೆದರಿಕೆ

ಇತ್ತೀಚೆಗೆ ನಾಗವಾರದ ಸೇಂಟ್ ಫಿಲೋಮಿನಾ ಆಸ್ಪತ್ರೆ‌ಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ.ಗೆ ಇ-ಮೇಲ್ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಇದು ಕೂಡ ಹುಸಿಯಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ಹತ್ತಾರು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದು, ಆ ಎಲ್ಲ ಶಾಲೆಗಳ ಮಕ್ಕಳಿಗೂ ರಜೆ ನೀಡಿ ಆವರಣ ತಲಾಶ್‌ ಮಾಡಲಾಗಿತ್ತು. ಇದು ಕೂಡ ಹುಸಿ ಎಂದು ಕಂಡುಬಂದಿತ್ತು. ಹೀಗೆ ಬೆದರಿಕೆ ಇಮೇಲ್‌ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದರು. ನಂತರ ದೆಹಲಿಯ ವಿಮಾನ ನಿಲ್ದಾಣ (delhi airport) ಮತ್ತು ಹಲವಾರು ಆಸ್ಪತ್ರೆಗಳಿಗೆ (hospital) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದಿದ್ದವು.

ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಹೀಗೆ ಬೆದರಿಕೆ ಮೇಲ್‌ ಮಾಡುತ್ತಿರುವವರ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ದೇಶದ ಸರ್ವರ್‌ ಕನೆಕ್ಷನ್‌ ತಪ್ಪಿಸಿ ವಿಪಿಎನ್‌ ಮೂಲಕ ಕಾರ್ಯಾಚರಿಸಿ ವಿದೇಶಗಳ ಸರ್ವರ್‌ನಿಂದ ಬಂದಂತೆ ತೋರಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಹೀಗಾಗಿ ಇದನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

ದೂರು ದಾಖಲು

ಇ-ಮೇಲ್‌ಗಳ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಇಂಟರ್‌ಪೋಲ್ ಮೂಲಕ ರಷ್ಯಾದ ಮೇಲಿಂಗ್ ಸೇವಾ ಕಂಪೆನಿ Mail.ru ಅನ್ನು ಸಂಪರ್ಕಿಸಿದರು. ಬಾಂಬ್ ಹುಸಿ ಇ-ಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿಯನ್ನು ಸೃಷ್ಟಿಸುವುದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುಳ್ಳು ಬಾಂಬ್ ಬೆದರಿಕೆಗಳ ಸಂದರ್ಭಗಳನ್ನು ಎದುರಿಸಲು ವಿವರವಾದ ಪ್ರೋಟೋಕಾಲ್ ಮತ್ತು ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ಸ್ (SOP) ಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ತಪ್ಪು ಮಾಹಿತಿಯಿಂದಾಗಿ ಯಾವುದೇ ಅನಗತ್ಯ ಭಯವನ್ನುಉಂಟಾಗದಂತೆ ತಡೆಯಲು ವ್ಯವಸ್ಥೆಗೊಳಿಸುವಂತೆ ಕೇಳಿಕೊಂಡಿದ್ದರು.
ಭದ್ರತೆ ಹೆಚ್ಚಳಕ್ಕೆ ಸೂಚನೆ

ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ, ಸಿಸಿಟಿವಿ ಕೆಮರಾ ಮತ್ತು ಇಮೇಲ್‌ಗಳ ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ. ತಪ್ಪು ಮಾಹಿತಿಯು ಯಾವುದೇ ಅನಗತ್ಯ ಭೀತಿಯನ್ನು ಸೃಷ್ಟಿಸದಂತೆ ಪರಿಣಾಮಕಾರಿ ಪ್ರತಿಕ್ರಿಯೆ ಕಾರ್ಯವಿಧಾನಕ್ಕಾಗಿ ನಿಕಟ ಸಮನ್ವಯವನ್ನು ಹೊಂದಲು ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ. 

ಇದನ್ನೂ ಓದಿ | Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

Exit mobile version