ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ತಡ ರಾತ್ರಿ ಬಾಂಬ್ ಬೆದರಿಕೆ (bomb threat) ಕರೆಯೊಂದು ಬಂದು ಪೊಲೀಸರ (Bangalore Police) ನಿದ್ದೆಗಡಿಸಿತು. ಪ್ರತಿಷ್ಟಿತ ರೆಸ್ಟೋರೆಂಟ್‌ಗೆ ಈ ಬಾಂಬ್ ಬೆದರಿಕೆ ಬಂದಿದ್ದು, ಪರಿಶೀಲಿಸಿದ ಬಳಿಕ ಇದು ಹುಸಿ ಕರೆ ಎಂಬುದು ತಿಳಿದುಬಂದಿದೆ.
ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್‌ಗೆ ರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಬಾಂಬ್ ಶೀಘ್ರವೇ ಬ್ಲಾಸ್ಟ್ ಆಗುತ್ತೆ ಎಂದು ಕರೆ ಮಾಡಿದ್ದ ಆರೋಪಿ ಬೆದರಿಸಿದ್ದ. ಇದರಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್‌ನವರು ಪೊಲೀಸರನ್ನು ಕರೆಸಿದ್ದರು. ರಾತ್ರಿ ಪೂರ್ತಿ ರೆಸ್ಟೋರೆಂಟ್ ಪರಿಶೀಲನೆ ನಡೆಸಿದ ಪೊಲೀಸರಿಗೆ ಬಾಂಬ್ ಕಂಡುಬರಲಿಲ್ಲ.
ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ವೇಲು ಎಂಬಾತನಿಂದ ಈ ಕೃತ್ಯ ನಡೆದಿದ್ದು, ಈತ ರೆಸ್ಟೋರೆಂಟ್‌ನ ನೌಕರನೇ ಆಗಿದ್ದಾನೆ. ರೆಸ್ಟೋರೆಂಟ್‌ನ ಇಂದಿರಾನಗರ ಬ್ರಾಂಚ್‌ನಲ್ಲಿ ಕೆಲಸ ಮಾಡುವ ವೇಲು ತನಗೆ ಸಂಬಳ ಕೊಟ್ಟಿಲ್ಲ ಎಂಬ ಸಿಟ್ಟಿನಿಂದ ಪಾನಮತ್ತನಾಗಿ ಬಾಂಬ್ ಬೆದರಿಕೆ ಮಾಡಿದ್ದ. ವೇಲುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹುಸಿ ಬಾಂಬ್ ಬೆದರಿಕೆ ಎಂಬುದು ಪತ್ತೆಯಾಗಿದೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಸ್ಫೋಟಕಗಳ ವಿಚಾರದಲ್ಲಿ ಬೆಂಗಳೂರು ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದಾರೆ. ಯಾವುದೇ ಕರೆಯನ್ನು ನಿರ್ಲಕ್ಷಿಸಲಾಗುತ್ತಿಲ್ಲ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಇಬ್ಬರು ಮುಖ್ಯ ಆರೋಪಿಗಳನ್ನು ಹುಡುಕಲಾಗುತ್ತಿದ್ದು, ಇವರು ಬೆಂಗಳೂರಿನಲ್ಲೇ ಸ್ಲೀಪರ್ ಸೆಲ್‌ನಲ್ಲಿ ಸ್ಫೋಟಕ ತಯಾರಿಸಿದ್ದರು ಎಂದು ಹೇಳಲಾಗಿದೆ.
ಭಟ್ಕಳದಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರ ಮನೆ ಪರಿಶೀಲನೆ
ಶಿವಮೊಗ್ಗ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ (Blast in Bengaluru) ತನಿಖೆ ಭಾಗವಾಗಿ ಬೆಂಗಳೂರು, ತೀರ್ಥಹಳ್ಳಿ ಸೇರಿ ಐದು ಕಡೆ ದಾಳಿ ನಡೆಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಂಕಿತ ಉಗ್ರನ ಮನೆ ಮೇಲೆ ಬುಧವಾರ ಎನ್‌ಐಎ ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಭಟ್ಕಳದ ತಕಿಯಾ ಸ್ಟ್ರೀಟ್‌ನ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ ಪುತ್ರ ಅಬ್ದುಲ್ ರಬಿ ಮನೆ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನ ಎನ್‌ಐಎ ಕಚೇರಿಗೆ ಗುರುವಾರ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್ ನೀಡಲಾಗಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ (rameshwaram cafe bomb blast) ಬಾಂಬರ್ ವಯಸ್ಸು ಅಬ್ದುಲ್ ರಬಿಗೆ ಹೋಲಿಕೆಯಾಗುವ ಹಿನ್ನೆಲೆ ಬೆಂಗಳೂರಿನ ಎನ್‌ಐಎ ತಂಡ ದಾಳಿ ನಡೆಸಿದ್ದು, ಸ್ಥಳೀಯ ಪೊಲೀಸರ ಸಹಕಾರದಿಂದ ಶಂಕಿತನ ಮನೆಯಲ್ಲಿ ಪರಿಶೀಲನೆ ನಡೆಸಿದೆ. ಗುರುವಾರ ಎನ್‌ಐಎ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಲು ಸೂಚನೆ ನೀಡಲಾಗಿದೆ.
ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಶೋಧ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತ ತೀರ್ಥಹಳ್ಳಿಯ 5ಕ್ಕೂ ಹೆಚ್ಚು ಕಡೆ ಎನ್‌ಐಎ ತಂಡ ದಾಳಿ ಮಾಡಿ ಪರಿಶೀಲಿಸಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳಾದ ಶಾರೀಕ್, ಮಾಜ್ ಮುನೀರ್ ಮನೆ ಮೇಲೆ ದಾಳಿ ನಡೆಸಿದ್ದು, ಜತೆಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಕಾರ್ಯಕರ್ತರ ಮನೆ ಮೇಲೂ ದಾಳಿ ನಡೆದಿದೆ. ಪಿಎಫ್‌ಐ ಸಂಘಟನೆಯಲ್ಲಿ ಭಾಗಿಯಾಗಿದ್ದ ಶಂಕೆ ಮೇರೆಗೆ ವ್ಯಕ್ತಿಯೊಬ್ಬರ ಶಾಪ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಸ್ಫೋಟದ ಕ್ಲೂ; ಬೆಂಗಳೂರು ಸೇರಿ 5 ನಗರಗಳಲ್ಲಿ ಎನ್‌ಐಎ ದಾಳಿ, ವಾಂಟೆಡ್ ಉಗ್ರರೇ ಟಾರ್ಗೆಟ್