Site icon Vistara News

‌ಕುಟುಂಬದ ವೀಕೆಂಡ್‌ ಸಂಭ್ರಮಕ್ಕೆ ರಕ್ತತರ್ಪಣ, ಒಟಿಪಿ ಹೆಸರಲ್ಲಿ ಶುರುವಾದ ಜಗಳದಲ್ಲಿ ಶವವಾಗಿ ಹೋದ ಟೆಕ್ಕಿ

Murder

ಚೆನ್ನೈ: ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಒಟಿಪಿ ಕೊಟ್ಟಿಲ್ಲ, ಪ್ರಯಾಣಿಕರ ಸಂಖ್ಯೆ ಜಾಸ್ತಿ ಆಯಿತು ಅಂತ ಶುರುವಾದ ಒಂದು ಪುಟ್ಟ ಜಗಳ ಕೊನೆಗೆ ಒಬ್ಬ ಎಂಜಿನಿಯರ್‌ ಸಾವಿನಲ್ಲಿ ಅಂತ್ಯಗೊಂಡಿದೆ. ಒಂದು ವಾರಾಂತ್ಯದ ಸಂಭ್ರಮ ಶವ ಯಾತ್ರೆಯಾದ ನೋವಿನ ಕಥನ ಇದು.

ಬಹುಶಃ ಉಮೇಂದರ್‌ ಇಂಥಹುದೊಂದು ಘಟನೆ ನಡೆಯಬಹುದು ಅಂತ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಕೊಯಮತ್ತೂರಿನ ಗುಡುವಂಚೇರಿ ನಿವಾಸಿಯಾಗಿರುವ ೩೪ ವರ್ಷದ ಅವರು ಖಾಸಗಿ ಸಾಫ್ಟ್‌ ವೇರ್‌ ಕಂಪನಿಯಲ್ಲಿ ಉದ್ಯೋಗಿ. ಸಾಧಾರಣ ಸಂಬಳವಿದ್ದರೂ ಮನೆಯಲ್ಲಿ ತುಂಬ ನೆಮ್ಮದಿ. ಅವರಿಗೆ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳು. ಶನಿವಾರ ಮತ್ತು ಭಾನುವಾರ ರಜೆ.

ಹೀಗಿರುತ್ತಾ, ಮೊನ್ನೇ ಶನಿವಾರ ಹೆಂಡತಿ ಮಕ್ಕಳೆಲ್ಲ ಸೇರಿ ಚೆನ್ನೈಗೆ ವೀಕೆಂಡ್‌ ಟ್ರಿಪ್‌ ಹೋಗಿ ಬರೋಣ ಎಂದು ನಿರ್ಧರಿಸಿದರು. ಜತೆಗೆ ಉಮೇಂದ್ರ ತಮ್ಮ ತಂಗಿಯನ್ನೂ ಕರೆದುಕೊಂಡು ಹೊರಟರು. ಆಕೆಗೂ ಇಬ್ಬರು ಮಕ್ಕಳು. ಎಲ್ಲ ಸೇರಿ ನಾಲ್ಕು ಮಕ್ಕಳು, ಮೂವರು ದೊಡ್ಡವರು.

ಚೆನ್ನೈಗೆ ಬಂದವರೇ ಅಲ್ಲಿ ಇಲ್ಲಿ ಸುತ್ತಾಡಿದರು. ಊಟ ಮಾಡಿದರು. ಕೊನೆಗೆ ಓಲ್ಡ್‌ ಮಹಾಬಲಿಪುರಂ ರಸ್ತೆಯಲ್ಲಿರುವ ನವಲೂರಿನ ಒಂದು ಮಾಲ್‌ನಲ್ಲಿ ಸಿನಿಮಾ ನೋಡಲು ತೆರಳಿದರು. ಸಿನಿಮಾ ನೋಡಿ ಖುಷಿಯಲ್ಲಿ ಹೊರಗೆ ಬಂದವರೇ ಇನ್ನು ಮನೆಗೆ ಹೋಗೋಣ ಎಂದು ತೀರ್ಮಾನಿಸಿದರು.

ಹಾಗೆ ಕ್ಯಾಬ್‌ ಬುಕ್‌ ಮಾಡಿದರು. ಎನ್‌. ರವಿ ಎಂಬ ಚಾಲಕ ಕಾರು ಹಿಡಿದುಕೊಂಡು ಬಂದ. ಅವನ ವಯಸ್ಸು ಸುಮಾರು ೪೧. ಕಾರು ಬಂದಿದ್ದನ್ನು ಕಂಡ ಕೂಡಲೇ ಮಕ್ಕಳೆಲ್ಲ ಖುಷಿಯಿಂದ ಓಡಿ ಹೋಗಿ, ನಾನು ಮುಂದೆ ನಾನು ಹಿಂದೆ ಎಂದು ಕಾರಿನೊಳಗೆ ನುಗ್ಗಿದರು.

ಇದನ್ನು ನೋಡಿದ ಚಾಲಕ ರವಿಗೆ ಸಿಟ್ಟು ಬಂತು. ಮೊದಲು ಒಟಿಪಿ ಕೊಡಿ ಎಂದು ಜೋರಿನಲ್ಲೇ ಹೇಳಿದ. ಅಷ್ಟು ಹೊತ್ತಿಗೆ ಇಬ್ಬರು ಹೆಂಗಸರೂ ಹತ್ತಿ ಕೂತಾಗಿತ್ತು. ಚಾಲಕ ರವಿ, ಓಟಿಪಿ ಕೊಟ್ಟಿಲ್ಲ, ಏನೂ ಇಲ್ಲ.. ಎಮ್ಮೆಗಳ ತರ ನುಗ್ತಾರೆ, ಇಳೀರಿ ಕೆಳಗೆ ಎನ್ನುವ ಧಾಟಿಯಲ್ಲಿ ಜೋರು ಮಾಡಿದ.

ಒಂದು ಕಡೆ ಓಟಿಪಿ ಕೊಟ್ಟಿಲ್ಲ, ಇನ್ನೊಂದು ಕಡೆ ಒಳಗೆ ನುಗ್ಗಿ ಕುಳಿತದ್ದು ಸೇರಿ ಅವನು ಕೆರಳಿದ್ದ. ಅದರ ಜತೆಗೆ ಜನ ಬೇರೆ ಏಳು! ʻʻನನ್ನ ಕಾರಿನಲ್ಲಿ ಏಳು ಜನ ಹೋಗೋಕೆ ಆಗೊಲ್ಲ. ನೀವು ಎಸ್‌ಯುವಿ ಬುಕ್‌ ಮಾಡಿ.. ಇಳೀರಿ ಕೆಳಗೆ ಎಂದು ಬೊಬ್ಬೆ ಹಾಕಿದ. ಇದನ್ನೆಲ್ಲ ಗಮನಿಸುತ್ತಿದ್ದ ಉಮೇಂದ್ರ ಮೊದಲು ಸ್ವಲ್ಪ ಕೋರಿಕೆಯ ಧ್ವನಿಯಲ್ಲಿ ಮಾತನಾಡಿದರು. ಆದರೆ, ರವಿ ಬೈಯಲು ಶುರು ಮಾಡಿದಾಗ ಇವರ ಧ್ವನಿಯೂ ಏರಿತು. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ರವಿ ಮೊಬೈಲ್‌ನಿಂದ ಉಮೇಂದ್ರ ಅವರ ತಲೆಗೆ ಗುದ್ದಿದ. ಆಕ್ರೋಶದ ಭರದಲ್ಲಿ ಮೂಗಿಗೂ ಒಂದು ಪೆಟ್ಟು ಬಿತ್ತು.

ಹೊಡೆತದ ಆಘಾತಕ್ಕೆ ತತ್ತರಿಸಿದ ಉಮೇಂದ್ರ ರಕ್ತಸ್ರಾವವಾಗಿ ನೆಲಕ್ಕೆ ಉರುಳಿದರು. ಪ್ರಜ್ಞೆ ತಪ್ಪಿತು. ಕೂಡಲೇ ಕುಟುಂಬದವರು ಸ್ಥಳೀಯರ ನೆರವಿನಿಂದ ಉಮೇಂದ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೊತ್ತಿಗಾಗಲೇ ಉಮೇಂದ್ರ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೇಲಂಬಾಕ್ಕಂ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದಾರೆ.

ಆದರೆ, ಅಷ್ಟೊಂದು ಆಸೆಯಿಂದ ಮನೆ ಬಿಟ್ಟಿದ್ದ ಕುಟುಂಬ ಒಂದು ಶವದೊಂದಿಗೆ ಮರಳುವಂತಾಗಿದ್ದು ಮಾತ್ರ ವಿಧಿಯ ನಾಟಕ.

ಇದನ್ನು ಓದಿ| ಸರಳ ವಾಸ್ತು ಖ್ಯಾತಿಯ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹತ್ಯೆ

Exit mobile version