ಭೋಪಾಲ್: ಉದ್ಯೋಗದಲ್ಲಿರುವ ತಾಯಂದಿರಿಗೆ ತಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗುವುದು ಸಂಕಟದ ವಿಷಯ. ಅವರೇನಾದರೂ ಈ ವಿಡಿಯೋ ನೋಡಿದರೆ ಗಾಬರಿ ಬೀಳುವುದು ಗ್ಯಾರಂಟಿ.
ಅಪ್ಪ-ಅಮ್ಮ ಮಾತ್ರ ಇರುವ ಚಿಕ್ಕ ಕುಟುಂಬದಲ್ಲಿ ಮಕ್ಕಳ ಪೋಷಣೆ ದೊಡ್ಡ ಸವಾಲಿನ ಕೆಲಸ. ಅದೂ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆಂದರೆ ಮಕ್ಕಳು ಸರಿಯಾದ ಆರೈಕೆ ಇಲ್ಲದೆ ಸೊರಗಬೇಕಾಗುತ್ತದೆ. ಆದರೆ ಇಂದು ನಗರಗಳಲ್ಲಿ ಇಬ್ಬರೂ ದುಡಿಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅನೇಕ ಪೋಷಕರು ಮಕ್ಕಳನ್ನು ತಾವಿಲ್ಲದಿರುವಾಗ ಆರೈಕೆ ಮಾಡಲು ದಾದಿಯರನ್ನು ನೇಮಿಸಿಕೊಳ್ಳುವುದು, ಡೇಕೇರ್‌ನಲ್ಲಿ ಬಿಡುವುದು ಸಾಮಾನ್ಯ.
ಮಧ್ಯಪ್ರದೇಶದಲ್ಲಿ ಹೀಗೆ ದುಡಿಯುವ ದಂಪತಿ ತಮ್ಮ ಚಿಕ್ಕ ಮಗುವನ್ನು ನೋಡಿಕೊಳ್ಳಲು ದಾದಿಯೊಬ್ಬರನ್ನು ನೇಮಿಸಿಕೊಂಡಿದ್ದರು. ಆಕೆ ಮನೆಯಲ್ಲಿಯೇ ಇದ್ದು, ಮಗುವನ್ನು ನೋಡಿ ಕೊಂಡು ಊಟ-ತಿಂಡಿ ತಿನ್ನಿಸುತ್ತಾಳೆ ಎಂದುಕೊಂಡಿದ್ದರು. ಆದರೆ ಆಕೆ ಮಾಡಿದ್ದೇ ಬೇರೆ. ತಮ್ಮ ಎರಡು ವರ್ಷದ ಮಗನನ್ನು ನೋಡಿಕೊಳ್ಳಲು ನೇಮಿಸಿದ ದಾದಿ ಮಗುವನ್ನು ಯಾವೆಲ್ಲಾ ರೀತಿ ಹಿಂಸಿಸುತ್ತಿದ್ದಳು ಎನ್ನವುದನ್ನು CCTV ಯಲ್ಲಿ ನೋಡಿ ಅವರೀಗ ಶಾಕ್ ಆಗಿದ್ದಾರೆ.
ಜಬಲ್ಪುರದ ನಿವಾಸಿಯಾಗಿರುವ ಈ ದಂಪತಿಯ ಎರಡು ವರ್ಷದ ಪುತ್ರ ಕೆಲವು ದಿನಗಳಿಂದ ನಿಶಕ್ತನಾಗಿದ್ದ ಹಾಗೂ ಸದಾ ಮೌನದಿಂದ ಇರುತಿದ್ದ. ಆಟೋಟದಲ್ಲಿ, ಹಾವಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಆದ್ದರಿಂದ್ದ ಪೋಷಕರು ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು. ಮಗುವನ್ನು ಪರೀಕ್ಷಿಸಿದ ವ್ಯೆದ್ಯರು ಮಗುವಿನ ದೇಹದ ಒಳಭಾಗ ಅಂಗಾಂಗಳು ಊದಿಕೊಂಡಿವೆ ಎಂದು ಹೇಳಿದರು. ಈ ಮಗುವಿಗೆ ಯಾರೋ ಚಿತ್ರಹಿಂಸೆ ನೀಡಿರಬಹುದು ಎಂಬ ಸುಳಿವು ನೀಡಿದರು. ಆದರೆ ಮನೆಯಲ್ಲಿಯೇ ಇರುವ ಮಗುವಿಗೆ ಆಗಿದ್ದಾದರೂ ಏನು ಎಂಬುದು ಪೋಷಕರಿಗೆ ಹೊಳೆಯಲಿಲ್ಲ.
ದಾದಿಯನ್ನು ವಿಚಾರಿಸದರೆ ಎಲ್ಲವೂ ಸರಿ ಇದೆ ಎಂಬ ವಿವರಣೆ ಸಿಕ್ಕಿತು. ಕೊನೆಗೆ ಅವರು ಮನೆಗೆ CCTV ಕ್ಯಾಮರಾ ಅಳವಡಿಸುವ ತೀರ್ಮಾನ ತೆಗೆದುಕೊಂಡರು. ಈ ವಿಷಯವನ್ನು ದಾದಿಗೆ ಹೇಳದೇ ಸುಮ್ಮನಿದ್ದರು. ಮಗುವಿನ ಪರಿಸ್ಥಿತಿ ಸುಧಾರಿಸದೇ ಇದ್ದುದ್ದರಿಂದ ಕೊನೆಗೊಂದು ದಿನ ಸಿಸಿಟಿವಿ ಫೂಟೇಜ್ ತೆಗೆದು ನೋಡಿದಾಗ ದಾದಿಯ ಬಣ್ಣ ಬಯಲಾಗಿತ್ತು.
ಮಗುವನ್ನು ನೋಡಿಕೊಳ್ಳಲು ನೇಮಿಸಿದ್ದ ದಾದಿ ರಜಿನಿ ಚೌಧರಿಯೇ ಮಗುವನ್ನು ಮನಸ್ಸಿಗೆ ಬಂದಂತೆ ಹೊಡೆಯುತ್ತಿದ್ದಳು. ತಿಂಗಳಿಗೆ 5,000 ಸಂಬಳದ ಜೊತೆಗೆ ಊಟವನ್ನು ಸಹ ಆಕೆಗೆ ನೀಡಲಾಗುತಿತ್ತಂತೆ. ಆದರೂ ಮಗು ಅತ್ತರೆ, ಏನಾದರೂ ಕೇಳಿದರೆ ಆಕೆ ಹೊಡೆಯುತ್ತಿದ್ದಳಂತೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ದಾದಿ ಮಗುವನ್ನು ಥಳಿಸುವುದು, ಕೂದಲು ಹಿಡಿದು ಎಳೆದುಕೊಂಡು ಹೋಗುವುದನ್ನು ಕಾಣಬಹುದು.
ಈಗ ದಂಪತಿಗಳು ಪೊಲೀಸರಿಗೆ ದಾದಿಯ ವಿರುದ್ಧ ದೂರು ನೀಡಿದ್ದಾರೆ. ಆಕೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ವೈದ್ಯರ ಮಹಾ ಪ್ರಮಾದ; ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದಾಗ ಕಣ್ಣುಬಿಟ್ಟ ಶಿಶು !