Site icon Vistara News

Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿದ; ಚೈನ್ ಸ್ನಾಚಿಂಗ್‌ಗೆ ಇಳಿದು ಸಿಕ್ಕಿಬಿದ್ದ

Chain snatching Case

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದವರು ಹಣಕ್ಕಾಗಿ ಯಾವ ಅಡ್ಡ ದಾರಿಯನ್ನಾದರೂ ಹಿಡಿಯಲು ತಯಾರಿರುತ್ತಾರೆ ಎನ್ನುವುದಕ್ಕೆ ಈತನೇ ಉತ್ತಮ ನಿದರ್ಶನ. ಹೌದು, ಆನ್‌ಲೈನ್‌ ಬೆಟ್ಟಿಂಗ್ ಚಟ ಮೈಗೂಡಿಸಿಕೊಂಡು ಮೈತುಂಬ ಸಾಲ ಮಾಡಿಕೊಂಡಿದ್ದವನೊಬ್ಬ ಮಾಡಿದ ಸಾಲ ತೀರಿಸಲು ಸರಗಳ್ಳತನಕ್ಕೆ (Chain snatching case)  ಇಳಿದು ಇದೀಗ ಸಿಕ್ಕಿಬಿದ್ದಿದ್ದಾನೆ. ಕತ್ರಿಗುಪ್ಪೆ ನಿವಾಸಿ ಕುಮಾರ್ ಬಂಧಿತ ಆರೋಪಿ.

ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಗೇಮ್ ಆಡುತ್ತಿದ್ದ ಆರೋಪಿ ಕುಮಾರ್ ಈ ವೇಳೆ ಸಾಕಷ್ಟು ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್‌ ಕಾರಣಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹಣ ಸಾಲ ಕೊಟ್ಟವರು ವಾಪಾಸ್ ನೀಡುವಂತೆ ಕೇಳತೊಡಗಿದಾಗ ಕುಮಾರ್‌ ಸರಗಳ್ಳತನಕ್ಕೆ ಇಳಿದಿದ್ದ.

ವಿಳಾಸ ಕೇಳುವ ನೆಪ

ಸರಗಳ್ಳತನಕ್ಕೆ ಕುಮಾರ್‌ ಖತರ್ನಾಕ್‌ ಯೋಜನೆ ರೂಪಿಸಿದ್ದ. ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರಕಳವು ಮಾಡುತ್ತಿದ್ದ. ಗಿರಿನಗರದ ಬೈರಪ್ಪ ಲೇಔಟ್‌ನಲ್ಲಿ ಕೃತ್ಯ ಎಸಗಿದ್ದ ವೇಳೆ ಸಿಕ್ಕಿಬಿದ್ದಿದ್ದ. ಸದ್ಯ ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕುಮಾರ್‌ ಮಾಡಿದ ಸಾಲ ತೀರಿಸಲು ಆಟೋವನ್ನೂ ಅಡವಿಟ್ಟಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸಾಲದ ಸಂಗತಿ ಬೆಳೆಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ.

ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದವ ಬಂಧನ

ಬೆಂಗಳೂರು: ಸುಲಭವಾಗಿ ಹಣ ಮಾಡಲು ಖತರ್ನಾಕ್ ಪ್ಲ್ಯಾನ್‌ ಮಾಡಿದ್ದ ವಂಚಕನೊಬ್ಬ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದು ಕಾರು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಜಮೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಖತರ್ನಾಕ್ ಪ್ಲ್ಯಾನ್‌?

ಹಾಗಾದರೆ ಈತ ಮಾಡುತ್ತಿದ್ದ ಖತರ್ನಾಕ್ ಕೆಲಸ ಏನು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಾರು ಚಾಲಕರೇ ಈತನ ಟಾರ್ಗೆಟ್. ಕಾರಿಗೆ ಬೇಕಂದೇ ಬೈಕ್ ಟಚ್ ಮಾಡಿ ಹಣ ಕೀಳುತ್ತಿದ್ದ. ʼʼಕಾರು ಹೋಗುವಾಗ ಜಮೀಲ್‌ ತನ್ನ ಬೈಕ್‌ ಅನ್ನು ಬೇಕಂತಲೇ ಟಚ್ ಮಾಡುತ್ತಿದ್ದ. ಬಳಿಕ ದೂರು ಕೊಡುತ್ತೇನೆ ಎಂದು ಬೆದರಿಸಿ ಚಾಲಕರಿಂದ ಹಣ ಕೀಳುತ್ತಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಕಾರು ಟಚ್ ಅಗಿದೆ ಎಂದು ಮಧ್ಯ ರಸ್ತೆಯಲ್ಲಿ ಅಡ್ಡ ಹಾಕುತ್ತಿದ್ದ. ಡ್ಯಾಮೇಜ್ ಸರಿಪಡಿಸಲು ದುಡ್ಡು ಕೊಡಿ ಎಂದು ಬಲ ಪ್ರಯೋಗ ಮಾಡುತ್ತಿದ್ದ. ದುಡ್ಡು ಕೊಡದೆ ಹೋದ್ರೆ ದೂರು ಕೊಡ್ತೀನಿ ಎಂದು ಹೆದರಿಸುತ್ತಿದ್ದʼʼ ಎಂದು ಹೇಳಿದ್ದಾರೆ.

ಈತನ ಮೇಲೆ ಇದುವರೆಗೆ ಒಟ್ಟು 17 ಪ್ರಕರಣ ದಾಖಲಾಗಿದೆ. ರಾಜ್ಯದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ವಿವಿಧ ಪ್ರಕರಣಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಕ್ಕಿ ಬಿದ್ದಿದ್ದು ಹೇಗೆ?

ಜಯನಗರ ಠಾಣಾ ವ್ಯಾಪ್ತಿಯಲ್ಲೂ ಕೂಡ ಇದೇ ರೀತಿ ಮಾಡಿ 30,000 ರೂ. ಪಡೆದಿದ್ದ ಜಮೀಲ್‌ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ಜಯನಗರ ಠಾಣೆಗೆ ಕಾರು ಚಾಲಕ ದೂರು ಕೊಟ್ಟಿದ್ದ. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Chain snatching Case : ಜಾಬ್‌ಗೆ ಹೋಗುವ ಹೆಣ್ಮಕ್ಕಳೇ ಟಾರ್ಗೆಟ್‌‌ ; ಸರಗಳ್ಳರ ಗ್ಯಾಂಗ್‌ಗೆ ಸಖತ್ ಗೂಸಾಇದನ್ನೂ ಓದಿ:

Exit mobile version