Site icon Vistara News

Chaitra Fraud Case : ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಈಗ ಕೈದಿ ನಂಬರ್ 9737!

Firebrand Chaitra is now prisoner number 9737

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ (Chaitra Fraud Case) ಮಾಡಿರುವ ಕುಂದಾಪುರ ಮೂಲದ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ (Chaitra) ಈಗ ಪರಪ್ಪನ ಅಗ್ರಹಾರದ ಕೈದಿ ನಂಬರ್ 9737!

ಚೈತ್ರಾ ಮತ್ತು ಗ್ಯಾಂಗ್‌ಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಈ ಸಂಬಂಧ ಈಗ ಚೈತ್ರಾಗೆ 9737ನೇ ನಂಬರ್ ಸಿಕ್ಕಿದ್ದರೆ, ಇತರ ಆರೋಪಿಗಳಾದ ಮೋಹನ್ ಕುಮಾರ್- 9738, ರಮೇಶ್- 9739, ಚೆನ್ನಾನಾಯ್ಕ- 9740 ಹಾಗೂ ಧನರಾಜ್- 9741 ನೇ ಕೈದಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Education News : 9 – 11ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಬೋರ್ಡ್ ಪರೀಕ್ಷೆ!

ಪರಪ್ಪನ ಅಗ್ರಹಾರದಲ್ಲಿ ಈ ವಂಚಕರು ಈಗಾಗಲೇ ಒಂದು ದಿನದ ಸೆರೆವಾಸ ಅನುಭವಿಸಿದಂತಾಗಿದೆ. ಶನಿವಾರ (ಸೆಪ್ಟೆಂಬರ್‌ 23) ರಾತ್ರಿ ತಡವಾಗಿ ಜೈಲಿಗೆ ಆಗಮಿಸಿದ್ದರು. ಹೀಗಾಗಿ ಭಾನುವಾರ (ಸೆಪ್ಟೆಂಬರ್‌ 24) ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ನೀಡಲಾಗಿದೆ. ಅಲ್ಲದೆ, ಕ್ವಾರೆಂಟೈನ್ ಬ್ಲಾಕ್‌ನಲ್ಲಿ ಚೈತ್ರಾ ಮತ್ತವಳ ತಂಡವನ್ನು ಇಡಲಾಗಿತ್ತು. ಇವರನ್ನು ಈಗ ಪರಪ್ಪನ ಅಗ್ರಹಾರದ ಮುಖ್ಯ ಜೈಲಿಗೆ ಶಿಫ್ಟ್ ಮಾಡಲಾಗುವುದು.

ಈಗಾಗಲೇ ಕೋಟಿ ಕೋಟಿ ವಂಚನೆಯ ಪ್ರಕರಣದ ತನಿಖೆ ಮುಂದುವರಿದಿದೆ. ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಮೇಲೆ ನಿಗಾ ಇಡಬೇಕಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಹೆಚ್ಚಿನ ಭದ್ರತೆಯ ಸಲುವಾಗಿ ಮುಖ್ಯ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಸದ್ಯ ಕ್ವಾರೆಂಟೈನ್ ಬ್ಲಾಕ್‌ನ ಮಹಿಳಾ ಬ್ಯಾರಾಕ್‌ನಲ್ಲಿ ಇತರೆ ಕೈದಿಗಳ ಜತೆ ಚೈತ್ರಾಳನ್ನು ಬಂಧಿಸಿಡಲಾಗಿದೆ.

ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್‌ ಅನ್ನು ಪ್ರತ್ಯೇಕ‌ ಪುರುಷರ ಸೆಲ್‌ನಲ್ಲಿ ಇಡಲಾಗಿದೆ. ಚೈತ್ರಾ ಹೊರತುಪಡಿಸಿ ಉಳಿದ ಆರೋಪಿಗಳಿಗೆ 10 ದಿನ ಕ್ವಾರಂಟೈನ್‌ ಮಾಡಲಾಗುವುದು.

ಚೈತ್ರಾ ಹೆಸರಿನ ಮುಂದೆ ಕುಂದಾಪುರ ಬಳಸದಂತೆ ಕೋರ್ಟ್‌ ತಡೆ!

ಚೈತ್ರಾ ಹೆಸರನ್ನು ಪದೇ ಪದೆ ವಂಚನೆಯ ಹೆಸರಲ್ಲಿ ಬಳಸುತ್ತಿರುವುದು ಕುಂದಾಪುರ (Kundapura Name of a town) ಎಂಬ ಊರಿಗೆ ಅಪಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಆಕೆಯ ಹೆಸರಿನ ಜತೆಗಿರುವ ʻಕುಂದಾಪುರʼ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್‌ ಈ ಬೇಡಿಕೆಗೆ ತಾತ್ಕಾಲಿಕ ಅಸ್ತು (Court restricts media from using Kundapuara name with Chaitra) ಎಂದು ಹೇಳಿತ್ತು. ಹೀಗಾಗಿ ಆಕೆಯ ಹೆಸರಿನ ಮುಂದೆ ಈಗ ಕುಂದಾಪುರ ಎಂದು ಬಳಸುವಂತೆ ಇಲ್ಲ.

ವಂಚನೆ ಪ್ರಕರಣವಾಗಿರುವುದರಿಂದ, ಬಿಜೆಪಿ ಟಿಕೆಟ್‌ ವಂಚನೆಯಾಗಿರುವುದರಿಂದ, ಪ್ರಧಾನ ಆರೋಪಿ ಸಾಕಷ್ಟು ಜನಪ್ರಿಯಳಾಗಿರುವುದರಿಂದ ಆಕೆಯ ಹೆಸರು ಮತ್ತು ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ ಆಕೆಯೊಂದಿಗೆ ಆಕೆಯ ಊರಿನ ಹೆಸರೂ ಜತೆಯಾಗಿ ಬರುತ್ತಿತ್ತು. ಇದು ಸಹಜವಾಗಿ ಅಲ್ಲಿನ ಜನರಿಗೆ ಬೇಸರ ಉಂಟು ಮಾಡಿತ್ತು.

ಇದನ್ನು ಗಮನಿಸಿದ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆಯ ಹೆಸರಿನ ಜತೆ ಕುಂದಾಪುರದ ಹೆಸರು ತಳುಕು ಹಾಕುವುದು ಬೇಡ ಎಂದು ಕೋರಿದ್ದರು.

ಇದನ್ನೂ ಓದಿ: Karnataka Politics : ಮಾಜಿ ಸಿಎಂ ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ; ಮಂಡ್ಯ ಸ್ಪರ್ಧೆ ಬಗ್ಗೆ ಹೇಳಿದ್ದೇನು?

ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೋಟೆಲ್ ಮಾಲೀಕರೂ ಆದ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ದಾವೆ ಹೂಡಿದವರು. ನಾನು ಕುಂದಾಪುರ ಮೂಲದವನಾಗಿದ್ದು, ಹೋಟೆಲ್ ನಡೆಸುತ್ತಿದ್ದೇನೆ. ಹೋಟೆಲ್‌ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ಅವರು ದಾವೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್‌, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿತ್ತು.

ಕುಂದಾಪುರ ಹೆಸರು ಬಳಕೆಗೆ ದಾವೆಯಲ್ಲಿ ಆಕ್ಷೇಪ

ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರಾ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿತ್ತು.

ಹೀಗಾಗಿ ಮಾಧ್ಯಮಗಳು ಆಕೆಯ ವಿಚಾರ ಬಂದಾಗ ಕುಂದಾಪುರ ಎಂಬ ಹೆಸರನ್ನು ಉಲ್ಲೇಖಿಸದಂತೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಜತೆಗೆ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವಿಡಿಯೊ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ಕೂಡಾ ಕೇಳಿದ್ದರು.

ಇದನ್ನೂ ಓದಿ: Congress Politics : ಶಿವಮೊಗ್ಗದಲ್ಲಿ ಕಚೇರಿ ತೆರೆದ ಆಯನೂರು ಮಂಜುನಾಥ್;‌ ಶುರುವಾಯ್ತಾ ಕೈ ಒಳಜಗಳ?

ಇದೀಗ ಕೋರ್ಟ್‌ ಅವರ ದಾವೆಯನ್ನು ಸ್ವೀಕರಿಸಿದ್ದು ಮುಂದಿನ ವಿಚಾರಣೆಯ ವರೆಗೆ ಮಾಧ್ಯಮಗಳು ಆಕೆಯ ಹೆಸರಿನ ಜತೆಗೆ ಕುಂದಾಪುರ ಎಂಬ ಹೆಸರನ್ನು ಬಳಸದಂತೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಚಾರಣೆಯವರೆಗೆ ಈ ನಿರ್ಬಂಧವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

Exit mobile version