ಮುಂಬೈ: ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್, ಭೂಗತ ಪಾತಕಿ ಛೋಟಾ ರಾಜನ್(Chhota Rajan)ನನ್ನು ಅಪರಾಧಿ ಎಂದು ಮುಂಬೈ ಕೋರ್ಟ್(Mumbai court) ಘೋಷಿಸಿದೆ. 2001ರಲ್ಲಿ ನಡೆದ ಜಯಾ ಶೆಟ್ಟಿ ಕೊಲೆ ಪ್ರಕರಣದ ಅಂತಿಮ ತೀರ್ಪು ಇಂದು ಹೊರಬಿದ್ದಿದ್ದು, ರಾಜನ್‌ನನ್ನು ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ಘೋಷಿಸಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ(MCOCA) ಕೇಸ್‌ಗಳ ವಿಚಾರಣೆ ನಡೆಸುವ ಮುಂಬೈ ವಿಶೇಷ ಕೋರ್ಟ್ ನ್ಯಾಯಾಧೀಶ ಎ ಎಂ ಪಾಟೀಲ್ ರಾಜನ್‌ನನ್ನು ಅಪರಾಧಿ ಎಂದು ಘೋಷಿಸಿದ್ದಾರೆ.
ಜಯಾ ಶೆಟ್ಟಿ ಯಾರು?
ಮುಂಬೈಯ ಗಾಮ್‌ದೇವಿಯ ಗೋಲ್ಡನ್ ಕ್ರೌನ್ ಹೊಟೇಲ್ ಮಾಲೀಕರಾಗಿದ್ದ ಜಯಾ ಶೆಟ್ಟಿ ಅವರಿಗೆ ಛೋಟಾ ರಾಜನ್ ಗ್ಯಾಂಗ್‌ನಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಆಗಾಗ ಕರೆ ಬರುತ್ತಿತ್ತು. ಇದಾದ ಬಳಿಕ ಕಲವೇ ದಿನಗಳಲ್ಲಿ ಅಂದರೆ ಮೇ 4, 2001ರಂದು ಹೊಟೇಲ್ ಒಳಗಡೆಯೇ ಜಯಾ ಶೆಟ್ಟಿ ಅವರನ್ನು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಜಯಾ ಅವರಿಗೆ ಬೆದರಿಕೆ ಬರುತ್ತಿದ್ದಂತೆ ಮುಂಬೈ ಪೊಲೀಸರು ಅವರಿಗೆ ಭಾರೀ ಭದ್ರತೆ ಒದಗಿಸಿದ್ದರು. 2000ನೇ ಇಸವಿ ನವೆಂಬರ್ ತಿಂಗಳಿನಿಂದ ಛೋಟಾ ರಾಜನ್ ಬೆದರಿಕೆ ಕರೆಯಿಂದ ಪೊಲೀಸರಿಗೆ ದೂರು ನೀಡಿದ್ದ ಜಯಾ ಶೆಟ್ಟಿ, 2001ರ ಮಾರ್ಚ್ ಅಂತ್ಯದಲ್ಲಿ ಭದ್ರತೆ ಹಿಂತೆಗೆದುಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಪೊಲೀಸ್ ಭದ್ರತೆ ಬಳಿಕ ಛೋಟಾ ರಾಜನ್ ದೂರವಾಣಿ ಕರೆ ಮಾಡಿ ಬೆದರಿಸುವ ಪ್ರಯತ್ನ ಮಾಡಿರಲಿಲ್ಲ. ಹೀಗಾಗಿ ಛೋಟಾ ರಾಜನ್ ತಮ್ಮ ತಂಟೆಗೆ ಬರುವುದಿಲ್ಲ ಎಂದು, ಪೊಲೀಸ್ ಭದ್ರತೆ ವಾಪಸ್ ಪಡೆಯಲು ಪೊಲೀಸರಿಗೆ ಮನವಿ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 2015 ಅಕ್ಟೋಬರ್‌ನಲ್ಲಿ ಚೋಟಾ ರಾಜನ್ ಇಂಡೋನೇಷ್ಯಾದಿಂದ ಭಾರತಕ್ಕೆ ಗಡಿಪಾರಾಗುತ್ತಿದ್ದಂತೆ ಆತನನ್ನು ಅರೆಸ್ಟ್ ಮಾಡಿ ದಿಲ್ಲಿಯ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಇನ್ನು ಘಟನೆ ನಡೆದ ಸಂದರ್ಭದಲ್ಲೇ ಹೊಟೇಲ್‌ನ ಮ್ಯಾನೇಜರ್ ಮತ್ತು ನೌಕರರು ಸೇರಿಕೊಂಡು ಇಬ್ಬರು ಶೂಟರ್‌ಗಳನ್ನು ಅರೆಸ್ಟ್ ಮಾಡಿದ್ದಾರೆ.
ಚೋಟಾ ರಾಜನ್ ಯಾರು?
ಚೋಟಾ ರಾಜನ್‌ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ . 2001ರಲ್ಲಿ ಛೋಟಾ ರಾಜನ್ ಹಾವಳಿ ಜೋರಾಗಿತ್ತು. ಮುಂಬೈನ ಉದ್ಯಮಿಗಳಿಂದ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡೋದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದ.
ಇದನ್ನೂ ಓದಿ:Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?
ಇತ್ತೀಚೆಗೆ ಛೋಟಾ ರಾಜನ್ ಆಪ್ತ ಪ್ರಸಾದ್ ಪೂಜಾರಿಯನ್ನು 20 ವರ್ಷಗಳ ಬಳಿಕ ಚೀನಾವು ಮುಂಬೈಗೆ ಗಡಿಪಾರು ಮಾಡಿತ್ತು. ಪ್ರಸಾದ್ ಪೂಜಾರಿ ಅಲಿಯಾಸ್ ಸುಭಾಷ್ ವಿಠ್ಠಲ್ ನನ್ನು ಚೀನಾದಿಂದ ಮುಂಬೈಗೆ ಗಡಿಪಾರು ಮಾಡಿದ್ದು, ಈತ ಛೋಟಾ ರಾಜನ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.