ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತವರು ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯದ ಪರಿಣಾಮ ಮತ್ತೊಂದು ಹಸುಗೂಸು ಸಾವಿಗೀಡಾಗಿದೆ.
ಜನಿಸಿದ ಮೂರೇ ದಿನಕ್ಕೆ ಮಗು ಸಾವಿಗೀಡಾಗಿದ್ದು, ಇದಕ್ಕೆ ವೈದ್ಯರ ನಿರ್ಲ್ಯಕ್ಷವೇ ಕಾರಣವೆನ್ನಲಾಗಿದೆ. ವೈದ್ಯರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ತಾಲ್ಲೂಕಿನ ಕಾನಗಮಾಕಲಹಳ್ಳಿ ಗ್ರಾಮದ ಮಂಜುಳ ರಮೇಶ್ ದಂಪತಿಗಳ ಮಗು ಮೃತಪಟ್ಟಿದೆ. ಮೂರು ದಿನದ ಹಿಂದೆ ಆಸ್ಪತ್ರೆಯಲ್ಲಿ ಜನ್ಮ ನೀಡಿ ಆಸ್ಪತ್ರೆಯಲ್ಲೇ ತಾಯಿ-ಮಗು ಉಳಿದುಕೊಂಡಿದ್ದರು. ಈ ನಡುವೆ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು ಮಕ್ಕಳ ತಜ್ಞರ ಬಳಿ ತೋರಿಸಿದ್ದಾರೆ . ಎರಡು ಹನಿ ಟಾನಿಕ್ ನೀಡಲಾಗಿತ್ತು.
ಅರ್ಧ ಗಂಟೆಯ ಬಳಿಕ ಮಗುವಿನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿತ್ತು. ಮತ್ತೆ ವೈದ್ಯರ ಬಳಿ ತೋರಿಸಿದಾಗ ಮಗು ಸಾವಿಗೀಡಾಗಿತ್ತು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಸಿಗದ ಪರಿಣಾಮ ಮಗು ಸಾವಿಗೀಡಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು ಬೇಟಿ ಪರಿಶೀಲಿಸಿದ್ದಾರೆ.