ಬೆಳಗಾವಿ: 2 ವರ್ಷದ ಮಗುವೊಂದು ಆಟವಾಡುತ್ತ ಹೋಗಿ ನೀರಿನ ಸಂಪ್‌ಗೆ (Water Sump) ಬಿದ್ದು ಸಾವಿಗೀಡಾದ ದುರ್ಘಟನೆ (Child Death) ಬೆಳಗಾವಿಯ (Belagavi news) ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.
ಸಾಯೀಶಾ ಸಂದೀಪ್ ಬಡವನಾಚೆ(2) ಮೃತಪಟ್ಟ ಮಗು. ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದುದರಿಂದ ಗಾಬರಿಯಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಪೋಷಕರು ಸಂಪ್ ಒಪನ್ ಮಾಡಿ ನೋಡಿದ್ದರು. ಸಂಪ್ ಓಪನ್ ಮಾಡುತ್ತಿದ್ದಂತೆ ಅಲ್ಲಿ ಬಿದ್ದಿದ್ದ ಮಗು ಸಾಯೀಶಾ ಕಂಡುಬಂದಿದ್ದಳು.
ಕೂಡಲೇ ಸಮೀಪದ ಆಸ್ಪತ್ರೆಗೆ ಮಗುವನ್ನು ಪೋಷಕರು ಕರೆದೊಯ್ದರಾದರೂ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮರ ಬಿದ್ದು ಮಹಿಳೆ ಸಾವು
ಯಾದಗಿರಿ: ಮಳೆ ಅವಾಂತರದಿಂದಾಗಿ, ನೀರು ತರಲು ಹೋದ ಮಹಿಳೆ ಮೇಲೆ ಮರ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಶ್ವೇತಾ ರಾಠೋಡ (21) ಮೃತ ಮಹಿಳೆ.
ಬಿರುಗಾಳಿ ಸಹಿತ ಮಳೆ ಬರುತ್ತಿದ್ದಾಗಲೇ ನೀರು ತರಲು ಹೋದ ಶ್ವೇತಾ ರಾಠೋಡ ಮೇಲೆ ಮರ ಬಿದ್ದಿದೆ. ಗಂಭೀರ ಗಾಯಗೊಂಡ ಶ್ವೇತಾರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಮಳೆ ಅವಾಂತರ; ಮನೆಯ ಶೀಟ್ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು
ಯಾದಗಿರಿ: ಮಳೆ ಅವಾಂತರಕ್ಕೆ ನಾಲ್ಕು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಚಪೆಟ್ಲಾ ರಸ್ತೆ ಬದಿ ನಡೆದಿದೆ. ಬಾಲಕಿ ಮನಸ್ವಿ ತಿಪ್ಪಣ್ಣ ಯಾದವ್ ಮೃತ ಬಾಲಕಿ. ಮನೆ ಶೀಟ್ ಮೇಲೆ ಇಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ.
ಜಮೀನಿನ ಶೀಟ್ ಮನೆಯಲ್ಲಿ ಪೋಷಕರ ಜತೆ ಬಾಲಕಿ ವಾಸವಾಗಿದ್ದಳು. ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಮನೆ ಶೀಟ್ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಸ್ಥಳದಲ್ಲಿ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು
ವಿಜಯನಗರ/ರಾಯಚೂರು/ಯಾದಗಿರಿ: ವೀಕೆಂಡ್ ಮೂಡ್‌ನಲ್ಲಿದ್ದವರಿಗೆ ವರುಣ ಶಾಕ್ (Karnataka Rain) ಕೊಟ್ಟಿದ್ದಾನೆ. ರಾಜ್ಯ ಹಲವೆಡೆ ಬಿರುಗಾಳಿ ಸಹಿತ (Karnataka weather Forecast) ಮಳೆಯಾಗುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ಕಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿವೆ.
ವಿಜಯನಗರದ ಹೂವಿನಹಡಗಲಿ ತಾಲೂಕಿನ ಎಂ.ಕಲ್ಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಕೆಂಚನಗೌಡ್ರ ಬಸವರಾಜ ಎಂಬ ರೈತ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಮಳೆಯೊಂದಿಗೆ ಗುಡುಗು, ಸಿಡಿಲು ಬಡಿದ ಪರಿಣಾಮ ಎಮ್ಮೆ ಮೃತಪಟ್ಟಿದೆ.
ಇನ್ನೂ ರಾಯಚೂರಿನ ಲಿಂಗಸುಗೂರಿನ ಕರೆಮರಡಿ ತಾಂಡದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದೆ. ಲಕ್ಷಣ್ಣ ಗುಂಡಪ್ಪ ರಾಠೋಡ ಎಂಬುವವರ ಎಮ್ಮೆಯನ್ನು ಮನೆ ಪಕ್ಕದಲ್ಲಿರುವ ಮರಕ್ಕೆ ಕಟ್ಟಿಹಾಕಿದ್ದರು. ಗುಡುಗು ಮಿಂಚು ಸಹಿತ ಸುರಿದ ಮಳೆ ವೇಳೆ ಸಿಡಿಲು ಬಡಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಮುದಗಲ್ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ನಾಗಲಾಪೂರ ಪಶು ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Constables: ಬಿಯರ್ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!