ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ (Social media) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮಾನಹಾನಿ (derogatory) ಮಾಡುವಂತಹ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ʼಪೋಸ್ಟ್‌ಕಾರ್ಡ್ʼ (Postcard) ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ (Mahesh Vikram Hegde) ಮತ್ತು ವಸಂತ್ ಗಿಳಿಯಾರ್ (Vasant Giliyar) ಅವರನ್ನು ಸದ್ಯಕ್ಕೆ ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ (Highcourt) ನಿರ್ದೇಶಿಸಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮೇ 9ಕ್ಕೆ ವಿಚಾರಣೆ ಮುಂದೂಡಿತು. ಅಲ್ಲಿಯವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತು.
ಮಹೇಶ್ ವಿಕ್ರಮ್ ಹೆಗ್ಡೆ ಅವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾನಹಾನಿ ಮಾಡುವಂತಹ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಜನರನ್ನು ಪ್ರಚೋದಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ. ಸಿದ್ದರಾಮಯ್ಯ ಅವರ ಫೋಟೊ ದುರ್ಬಳಕೆ ಮಾಡಿಕೊಂಡಿದ್ದಾರೆ. ಜತೆಗೆ, ಪೋಟೋವನ್ನು ಕೆಟ್ಟ ಮಾಹಿತಿಯೊಂದಿಗೆ ಬಳಕೆ ಮಾಡುವ ಮೂಲಕ ಸಿಎಂ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಹರೀಶ್ ನಾಗರಾಜು 2024ರ ಏ.9ರಂದು ಅರ್ಜಿದಾರರು ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಪಶ್ವಿಮ ವಿಭಾಗದ ಸಿಇಎನ್ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದಾರೆ.