ಮುಂಬೈ: ಬಹುದೊಡ್ಡ ಕಾರ್ಯಾಚರಣೆಯೊಂದರಲ್ಲಿ ಬರೋಬ್ಬರಿ 40 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ (Cocaine Trafficking) ಮಹಿಳೆಯನ್ನು ಶುಕ್ರವಾರ (ಜನವರಿ 12) ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಂದಾಯ ನಿರ್ದೇಶನಾಲಯ (Directorate of Revenue-DRI) ನೇತೃತ್ವದ ಮಹತ್ವದ ಈ ಕಾರ್ಯಾಚರಣೆಯಲ್ಲಿ 21 ವರ್ಷದ ಥಾಯ್ ಮಹಿಳೆ ಸಿಕ್ಕಿ ಬಿದ್ದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ, ಅಡಿಸ್ ಅಬಾಬಾದಿಂದ ಆಗಮಿಸಿದ ಮಹಿಳೆಯನ್ನು ತಪಾಸಣೆ ನಡೆಸಿತು. ಅಕೆಯನ್ನು ಪರೀಕ್ಷಿಸಿದಾಗ ಮೊದಲು ಯಾವುದೇ ಅನುಮಾನಾಸ್ಪ ವಸ್ತು ಕಂಡು ಬಂದಿರಲಿಲ್ಲ. ಬಳಿಕ ಆಕೆಯ ಟ್ರಾಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬಿಳಿ ಪುಡಿಯಂತಹ ವಸ್ತುವನ್ನು ಹೊಂದಿರುವ ಅನೇಕ ಪ್ಯಾಕೆಟ್‌ಗಳು ಕಂಡುಬಂದವು. ಸಂಶಯಗೊಂಡು ಈ ವಸ್ತುವನ್ನು ತನಿಖೆಗೆ ಒಳಪಡಿಸಿದಾಗ ಕೊಕೇನ್ ಎನ್ನುವುದು ದೃಢಪಟ್ಟಿತ್ತು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 40 ಕೋಟಿ ರೂ. ಮೌಲ್ಯವನ್ನು ಹೊಂದಿದೆ ಎಂದು ಕಂದಾಯ ನಿರ್ದೇಶನಾಲಯದ ಅಧಿಕಾರಿಗಳು ವಿವರಿಸಿದ್ದಾರೆ.
ಬಂಧಿತ ಮಹಿಳೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ & ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (Narcotic Drugs and Psychotropic Substances-NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ದೆಹಲಿಯಲ್ಲಿಯೂ ಅರೆಸ್ಟ್
ಇತ್ತೀಚೆಗೆ ರಾಷ್ಟ್ರ ದೆಹಲಿಯ ರಾಜಧಾನಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಸಿಡಿಮದ್ದುಗಳನ್ನು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ಪಂಜಾಬ್ ಮೂಲದ 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪಂಜಾಬ್‌ನ ಗುರುದಾಸ್‌ಪುರದ ನಿವಾಸಿ ಗುರಿಂದರ್ ಸಿಂಗ್ ಅಮೃತಸರಕ್ಕೆ ತೆರಳುವ ವಿಮಾನಕ್ಕೆ ಹತ್ತಲು ತೆರಳುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: ಹ್ಯಾಂಡ್ ಬ್ಯಾಗ್‌ನಲ್ಲಿ ಚಿನ್ನದ ಪೇಸ್ಟ್; ಹೊಟ್ಟೆಯೊಳಗೆ ಮಾತ್ರೆ ರೂಪದಲ್ಲಿತ್ತು 20 ಕೋಟಿ ರೂ. ಮೌಲ್ಯದ ಡ್ರಗ್ಸ್!
ಗುರಿಂದರ್ ಸಿಂಗ್‌ನ ಬ್ಯಾಗ್ ಪರಿಶೀಲಿಸುವ ವೇಳೆ ಭದ್ರತಾ ಸಿಬ್ಬಂದಿಗೆ ಸಜೀವ ಮದ್ದುಗುಂಡುಗಳು ಕಂಡು ಬಂದಿವೆ. ಬಳಿಕ ಬ್ಯಾಗ್ ಅನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಯಿತು. ಒಟ್ಟು 50 ಸಜೀವ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ದು ಗುಂಡುಗಳನ್ನು ಸಾಗಿಸಲು ಆತನ ಬಳಿ ಪರವಾನಗಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ.