Site icon Vistara News

Cyber Crime: ಫ್ಯೂಚರ್ ವೈಫ್‌ ಫೋಟೊ ಹಾಕಿ ರೂಪಸಿ ಎಂದವನ ಮೇಲೆ ಕಂಪ್ಲೇಂಟ್!‌ ನಟಿ ಸ್ವಾತಿಷ್ಟಾಗೆ ಹುಡುಗ ಫಿಕ್ಸ್‌ ಆದ್ನಾ?

cyber crime

cyber crime

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದ ಬಳಕೆ ವ್ಯಾಪಕವಾಗಿದೆ. ಕೆಲವೊಮ್ಮೆ ಇದು ಸಂಘರ್ಷಕ್ಕೂ ಕಾರಣವಾಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂಬಂತಿದೆ ಈ ಘಟನೆ. ತನ್ನ ಭಾವಿ ಪತ್ನಿಯ ಫೋಟೊವನ್ನು ಯುವಕನೊಬ್ಬ ಆತನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆಂದು ವ್ಯಕ್ತಿಯೊಬ್ಬ ಸೈಬರ್‌ ಕ್ರೈಂನಡಿ (Cyber Crime) ಪೊಲೀಸರಿಗೆ ದೂರಿದ್ದಾನೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಣಿಸಿಕೊಂಡ ಪೋಸ್ಟ್‌. ಆದರೆ, “ಒಂದು ಸರಳ ಪ್ರೇಮ ಕಥೆ” ಹಿರೋಯಿನ್‌ ತನ್ನ ಫ್ಯೂಚರ್‌ ವೈಫ್‌ ಎಂದು ಹೇಳಿಕೊಂಡಿದ್ದು, ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಅವಳೇ ನನ್ನವಳು ಎಂದವನ ಬಗ್ಗೆಯೂ ಸತ್ಯಾಸತ್ಯತೆ ಹೊರಬರಬೇಕಿದೆ.

ಘಟನೆ ವಿವರ

ತಮ್ಮ ಎಕ್ಸ್‌ ಖಾತೆಯಲ್ಲಿ ಗುರು ಸತ್ತೂರ್‌ ಎನ್ನುವ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಫೋಟೊವನ್ನು ಹಂಚಿಕೊಂಡು ʼರೂಪಸಿ.. ಸುಮ್ಮನೆ ಹೇಗಿರಲಿʼ ಎಂದು ಬರೆದುಕೊಂಡಿದ್ದಾನೆ. ಅಚ್ಚರಿ ಎಂದರೆ ಅದು ನಟಿ ಸ್ವಾತಿಷ್ಟಾ ಕೃಷ್ಣನ್‌ ಅವರ ಫೋಟೊ ಆಗಿತ್ತು. ಇತ್ತೀಚೆಗೆ ತೆರೆಕಂಡ ಕನ್ನಡ ಸಿನಿಮಾ ʼಒಂದು ಸರಳ ಪ್ರೇಮ ಕಥೆʼ ಸಿನಿಮಾದಲ್ಲಿ ಸ್ವಾತಿಷ್ಟಾ ಅಭಿನಯಿಸಿದ್ದರು. ಆದರೆ, ಈ ಪೋಸ್ಟ್‌ ನೋಡಿ ಕೆಂಡವಾದ ಡಾ. ಫ್ರೋಡೋ ಎನ್ನುವ “ಎಕ್ಸ್” ಖಾತೆದಾರನೊಬ್ಬ ತಕರಾರು ತೆಗೆದಿದ್ದಾನೆ. ಆಕೆ ನನ್ನ ಫ್ಯೂಚರ್‌ ವೈಫ್‌ ಆಗಿದ್ದು, ಕ್ರಮ ಕೈಗೊಳ್ಳಿ ಎಂದು “ಎಕ್ಸ್” ಮೂಲಕ ಬೆಂಗಳೂರು ನಗರ ಪೊಲೀಸರ ಮೊರೆ ಹೋಗಿದ್ದಾನೆ.

ಡಾ. ಫ್ರೋಡೋ ಹೇಳಿದ್ದೇನು?

ʼʼಗುರು ಸತ್ತಾರ್‌ ಎನ್ನುವ ವ್ಯಕ್ತಿ ನನ್ನ ಭಾವಿ ಪತ್ನಿಯ ಫೋಟೊವನ್ನು ಬಳಸಿ ʼರೂಪಸಿ ಸುಮ್ಮನೆ ಹೇಗಿರಲಿʼ ಎಂಬ ಅಡಿಶೀರ್ಷಿಕೆ ನೀಡಿ ಪೋಸ್ಟ್‌ ಮಾಡಿದ್ದಾನೆ. ನಾವಿಬ್ಬರೂ (ಸ್ವಾತಿಷ್ಟ ಕೃಷ್ಣನ್‌) ನಮ್ಮ ಸಂಬಂಧವನ್ನು ಬಹಿರಂಗವಾಗಿ ಘೋಷಿಸಿಕೊಂಡ ಮೇಲೂ ಈತ ಈ ರೀತಿ ಕಮೆಂಟ್‌ ಹಾಕಿದ್ದಾನೆ. ಈ ಬಗ್ಗೆ ಕ್ರಮ ಕೈಗೊಳ್ಳಿʼʼ ಎಂದು ಡಾ. ಫ್ರೋಡೋ ಎಂಬಾತ ಬೆಂಗಳೂರು ನಗರ ಪೊಲೀಸರಿಗೆ ಎಕ್ಸ್‌ ಮೂಲಕ ಮನವಿ ಮಾಡಿದ್ದಾನೆ.

ಇದಕ್ಕೆ ಬೆಂಗಳೂರು ನಗರ ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ʼʼನಿಮ್ಮ ಸಮೀಪದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಲಿಖಿತವಾಗಿ ದೂರು ನೀಡಿ. ಜತೆಗೆ ಸಂಪೂರ್ಣ ಮಾಹಿತಿ ಒದಗಿಸಿ. ಒಂದು ವೇಳೆ ತುರ್ತು ಅಗತ್ಯವಿದ್ದರೆ 112 ಸಂಖ್ಯೆಗೆ ಸಂಪರ್ಕಿಸಿʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Murder Case: ಮಂಡ್ಯದ ಬೀದಿಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಲೆ

ಇನ್ನು ಈ ಬಗ್ಗೆ ವಿಸ್ತಾರ ನ್ಯೂಸ್‌ ಫ್ಯಾಕ್ಟ್‌ ಚೆಕ್‌ (Fact Check) ಮಾಡಿದಾಗ, ಡಾ. ಫ್ರೋಡೋ ಎನ್ನುವುದು ದೂರುದಾರನ ನಿಜವಾದ ಹೆಸರು ಏನು ಎನ್ನುವುದು ತಿಳಿದು ಬಂದಿಲ್ಲ. ಜತೆಗೆ ಪ್ರೊಫೈಲ್‌ನಲ್ಲಿ ಆತನ ಫೋಟೊ ಇಲ್ಲದಿರುವುದು ಸಂಶಯ ಮೂಡಿಸಿದೆ. ಅಲ್ಲದೆ, ಇದು ನಟಿಯ ಫೋಟೊ ಆಗಿರುವುದರಿಂದ ದೂರಿನ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಸದ್ಯ ಆತ ಮುಂದಿನ ಕ್ರಮ ಕೈಗೊಂಡಿದ್ದಾನೆಯೇ ಎನ್ನುವುದು ತಿಳಿದು ಬಂದಿಲ್ಲ. ಅಲ್ಲದೆ, ನಟಿ ಸ್ವಾತಿಷ್ಟ ಕೃಷ್ಣನ್‌ ಸಹ ಇದುವರೆಗೆ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version