ಕೋಲಾರ: ಮದುವೆಯ (Marriage) ಮೊದಲ ರಾತ್ರಿಯೇ ಜಗಳ (Quarrel) ತಾರಕಕ್ಕೇರಿ ಮಚ್ಚಿನಲ್ಲಿ ಪರಸ್ಪರ ಕೊಚ್ಚಿಕೊಂಡಿದ್ದ ವಧು- ವರ ಪ್ರಕರಣದಲ್ಲಿ, ವಧುವಿನ ಜೊತೆಗೆ ವರನೂ (Couple Death) ಮೃತಪಟ್ಟಿದ್ದಾನೆ. ನಿನ್ನೆ ಕೋಲಾರದ (Kolar news) ಕೆಜಿಎಫ್‌ನ ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿತ್ತು.
ನಿನ್ನೆ ಕೆಜಿಎಫ್ ಆಸ್ಪತ್ರೆಯಲ್ಲಿ ವಧು ಲಿಖಿತಶ್ರೀ (20) ಸಾವನ್ನಪ್ಪಿದ್ದಳು. ಆಸ್ಪತ್ರೆ ಸೇರಿದ್ದ ವರ ನವೀನ್ (28) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿದ್ದ ನವೀನ್ ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು.
ನಿನ್ನೆ ಬೆಳಗ್ಗೆ ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಕೆಲಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಮಚ್ಚು ಹಿಡಿದು ಕೊಚ್ಚಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ವಧು ನಿನ್ನೆಯೇ ಕೊನೆಯುಸಿರೆಳೆದಿದ್ದಳು. ಸ್ಥಳಕ್ಕೆ ಆ್ಯಂಡರ್‌ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ಹುಟ್ಟಿಕೊಂಡಿದೆ ಎಂಬುದು ಗೊತ್ತಾಗಿಲ್ಲ.
ಬಸ್ ಚಾಲಕನ ಓವರ್ ಸ್ಪೀಡ್‌ಗೆ ಗರ್ಭಿಣಿ ಬಲಿ
ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಓವರ್ ಸ್ಪೀಡ್‌ಗೆ ಗರ್ಭಿಣಿ ಬಲಿಯಾದ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಬಳಿ ನಡೆದಿದೆ. ನಮಿತಾ (22) ಸ್ಥಳದಲ್ಲೇ ಸಾವನ್ನಪ್ಪಿದ ಗರ್ಭಿಣಿ. ಚೆಕಪ್‌ಗಾಗಿ ಹೋಲಿ ಕ್ರಾಸ್ ಆಸ್ಪತ್ರೆಗೆ ಬದಿದ್ದ ಮಹಿಳೆ, ತಪಾಸಣೆ ಬಳಿಕ ಆಸ್ಪತ್ರೆ ಬಳಿ ರಸ್ತೆ ದಾಟುವಾಗ ಬಸ್ ಡಿಕ್ಕಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆಪಘಾತವಾಗುತ್ತಿದ್ದಂತೆ ಕುಟುಂಬಸ್ಥರು, ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹೈರಾಣಾದರು. ಅಪಘಾತವಾದ ಬಳಿಕ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್