Site icon Vistara News

Crime News: ಇನ್ಶೂರೆನ್ಸ್‌ ಹಣಕ್ಕಾಗಿ ಭಿಕ್ಷುಕನನ್ನು ಕೊಂದವ 17 ವರ್ಷದ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

Murder Case

ಅಹಮದಾಬಾದ್‌: ಜೀವ ವಿಮೆಯ ಹಣಕ್ಕಾಗಿ (Insurance money) ಭಿಕ್ಷುಕನನ್ನು ಕೊಂದ ಪ್ರಕರಣದಲ್ಲಿ ಸುಮಾರು 17 ವರ್ಷಗಳ ಬಳಿಕ ಆರೋಪಿಯನ್ನು ಅಹಮದಾಬಾದ್‌ನ ನಿಕೋಲ್‌ ಏರಿಯಾದಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಗೌತಮ ಬುದ್ಧನಗರ ಮೂಲದ 39 ವರ್ಷದ ಅನಿಲ್‌ ಸಿಂಗ್‌ ಚೌಧರಿ ಬಂಧಿತ. ಈತ 80 ಲಕ್ಷ ರೂ.ಗಳ ವಿಮೆ ಹಣವನ್ನು ಪಡೆಯಲು ಭಿಕ್ಷುಕನೊಬ್ಬನನ್ನು ಕೊಂದು 17 ವರ್ಷಗಳಿಂದ ಹೊಸ ಗುರುತಿನೊಂದಿಗೆ, ರಾಜ್‌ಕುಮಾರ್‌ ಚೌಧರಿ ಹೆಸರಿನೊಂದಿಗೆ ಜೀವನ ನಡೆಸುತ್ತಿದ್ದ ಎಂದು ಅಹಮದಾಬಾದ್‌ ಡಿಟೆಕ್ಷನ್ ಆಫ್ ಕ್ರೈಮ್ ಬ್ರ್ಯಾಂಚ್‌ (DCB)ನ ಮೂಲಗಳು ತಿಳಿಸಿವೆ (Crime News).

2006ರ ಜುಲೈ 31ರಂದು ಆಗ್ರಾದ ರಕಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಅಪಘಾತವಾಗಿತ್ತು. ಚಾಲಕ ಅನಿಲ್‌ ಸಿಂಗ್‌ ಚೌಧರಿ ಆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ಮೃತನನ್ನು ಅನಿಲ್‌ ಸಿಂಗ್‌ ಚೌಧರಿ ಎಂದು ಆತನ ತಂದೆ ಗುರುತಿಸಿದ್ದರು. ಆ ಮೂಲಕ ಇನ್ಶೂರೆನ್ಸ್‌ ಹಣ ಪಡೆಯುವುದು ಅನಿಲ್‌ ಸಿಂಗ್‌ ಚೌಧರಿ ಮತ್ತು ಆತನ ತಂದೆಯ ಯೋಜನೆಯಾಗಿತ್ತು. ಇತ್ತೀಚೆಗೆ ಅಹಮದಾಬಾದ್‌ ಕ್ರೈಂ ಬ್ರ್ಯಾಂಚ್‌ ಪೊಲೀಸರಿಗೆ ಅನಿಲ್‌ ಸಿಂಗ್‌ ಚೌಧರಿ ಇನ್ನೂ ಬದುಕಿದ್ದು, ರಾಜ್‌ಕುಮಾರ್‌ ಚೌಧರಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿರುವುದರ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಆತನನ್ನು ಬಂಧಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಏನಿದು ಸಿನಿಮೀಯ ಘಟನೆ?

ಅನಿಲ್‌ ಸಿಂಗ್‌ ತಂದೆ ವಿಜಯ್‌ಪಾಲ್‌ ಸಿಂಗ್‌ ಚೌಧರಿ ಆತನ ಹೆಸರಿನಲ್ಲಿ 80 ಲಕ್ಷ ರೂ. ಜೀವ ವಿಮೆ ಪಾಲಿಸಿ ಮತ್ತು 10 ಲಕ್ಷ ರೂ. ಕಾರ್‌ ಇನ್ಶೂರೆನ್ಸ್‌ ಖರೀದಿಸಿದ್ದರು. ಈ ಹಣವನ್ನು ಲಪಟಾಯಿಸಲು ಯೋಜನೆ ರೂಪಿಸಿದ್ದರು. ಅದರ ಭಾಗವಾಗಿ ಅನಿಲ್‌ ಸಿಂಗ್‌, ಆತನ ತಂದೆ, ಸಹೋದರ ಮತ್ತು ಇಬ್ಬರು ಸ್ನೇಹಿತರು ಸೇರಿ ರೈಲಿನಲ್ಲಿ ಆಗಾಗ ಕಂಡು ಬರುತ್ತಿದ್ದ ಭಿಕ್ಷುಕನನ್ನು ಆಗ್ರಾ ಬಳಿಯ ಹೋಟೆಲ್‌ಗೆ ಕರೆಸಿಕೊಂಡು ಆತನಿಗೆ ನಿದ್ದೆ ಬರುವ ಮಾತ್ರ ಬೆರೆಸಿದ ಆಹಾರ ನೀಡಿದ್ದರು. ಬಳಿಕ ಆರೋಪಿಗಳು ಪ್ರಜ್ಞೆ ತಪ್ಪಿ ಬಿದ್ದಿದ್ದ ಭಿಕ್ಷುಕನನ್ನು ಕಾರಿನಲ್ಲಿ ಕರೆದೊಯ್ದರು. ನಿರ್ಜನ ಪ್ರದೇಶದಲ್ಲಿ ಕಾರನ್ನು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಸಿ ಅಪಘಾತವೆಂಬಂತೆ ಬಿಂಬಿಸಿದರು. ಭಿಕ್ಷುಕನನ್ನು ಚಾಲಕನ ಸೀಟಿನಲ್ಲಿ ಕೂರಿಸಿ ಕಾರಿಗೆ ಬೆಂಕಿ ಹಚ್ಚಿದ್ದರು. ಅಪಘಾತದಿಂದ ಕಾರಿಗೆ ಬೆಂಕಿ ಹತ್ತಿಕೊಂಡಿರುವುದಾಗಿ ಪೊಲೀಸರು ನಂಬಿದ್ದರು. ಕಾರಿನಲ್ಲಿದ್ದ ಮೃತದೇಹ ತಮ್ಮ ಮಗನದ್ದೆಂದು ಹೇಳಿದ್ದ ವಿಜಯ್‌ಪಾಲ್‌ ಸಿಂಗ್‌ ಚೌಧರಿ ಅಂತ್ಯ ಸಂಸ್ಕಾರವನ್ನೂ ನಡೆಸಿ ಕಾನೂನಿನ ಕಣ್ಣಿಗೆ ಮಣ್ಣೆರಚಿದ್ದರು.

ಇದನ್ನೂ ಓದಿ: BSF Jawan: ಗಡಿಯಲ್ಲಿ ಪಾಕ್‌ ಸೈನಿಕರ ಉದ್ಧಟತನ; ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ

ಬಳಿಕ ಬಂದ ಇನ್ಶೂರೆನ್ಸ್‌ ಹಣವನ್ನು ಎಲ್ಲರೂ ಹಂಚಿಕೊಂಡಿದ್ದರು. ಅಲ್ಲಿಂದ ಅಹಮದಾಬಾದ್‌ಗೆ ತೆರಳಿದ ಅನಿಲ್‌ ಹೊಸ ಹೆಸರಿನೊಂದಿಗೆ ಪರಿಚಯಿಸಿಕೊಂಡಿದ್ದ. ಅಲ್ಲಿನ ಯುವತಿಯನ್ನೂ ಮದುವೆಯಾದ. ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಆತ ಬಳಿಕ ಎಂದಿಗೂ ತನ್ನ ಹುಟ್ಟೂರಿಗೆ ಮರಳಿರಲಿಲ್ಲ. ಅಲ್ಲದೆ ಒಂದಿಬ್ಬರು ಕುಟುಂಬದ ಸದಸ್ಯರು ಬಿಟ್ಟರೆ ಉಳಿದವರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಅಹಮದಾಬಾದ್‌ನಲ್ಲಿ ಮೊದಲು ಆಟೋ ಓಡಿಸುತ್ತಿದ್ದ ಅನಿಲ್‌ ಬಳಿಕ ಸಾಲ ಮಾಡಿ ಕಾರು ಖರೀದಿಸಿದ್ದ. ಸದ್ಯ ಪೊಲೀಸರು ಆತನ ಹೊಸ ಹೆಸರಿನಲ್ಲಿರುವ ಡ್ರೈವಿಂಗ್‌ ಲೈಸೆನ್ಸ್ ಮತ್ತು ಆಧಾರ್‌ ಕಾರ್ಡ್‌ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

ಮಲಯಾಳಂ ಸಿನಿಮಾ ರೀತಿಯ ಘಟನೆ ಇದು

ಇದೇ ರೀತಿಯ ಘಟನೆಯನ್ನು ಹೋಲುವ ಸಿನಿಮಾ ʼಕುರುಪ್‌ʼ 2021ರಲ್ಲಿ ಮಲಯಾಳಂನಲ್ಲಿ ತೆರೆಕಂಡಿತ್ತು. ಸತ್ಯ ಘಟನೆ ಆಧಾರಿತ ಈ ಚಿತ್ರ ಸುಕುಮಾರ್‌ ಕುರುಪ್‌ ಎನ್ನುವ ಅಪರಾಧಿಯ ಕುರಿತಾಗಿತ್ತು. ಆತನೂ ಹಣಕ್ಕಾಗಿ ಈ ರೀತಿಯ ಕಟ್ಟು ಕಥೆ ಕಟ್ಟಿದ್ದ ಎನ್ನುವ ವಿವರ ಈ ಚಿತ್ರದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version