ಕೊಚ್ಚಿ: ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನೊಳಗೆ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಮೇಲೆ ಇದ್ದಕ್ಕಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ (fire in train) ಪರಿಣಾಮ, ಎಂಟು ಮಂದಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಇದಾದ ಕೆಲವೇ ಗಂಟೆಗಳಲ್ಲಿ ಇದೇ ರೈಲಿನಿಂದ ನಾಪತ್ತೆಯಾಗಿದ್ದ ಮೂವರು ಪ್ರಯಾಣಿಕರ ಶವಗಳು ಹಳಿಯಲ್ಲಿ ಪತ್ತೆಯಾಗಿವೆ.
ಭಾನುವಾರ ರಾತ್ರಿ ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನೊಳಗೆ ಈ ದಾರುಣ ಘಟನೆ ನಡೆದಿದೆ. ರಾತ್ರಿ 9.45ರ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕರ ಮೇಲೆ ದಹನಕಾರಿ ದ್ರವವನ್ನು ಸುರಿದು ಬೆಂಕಿ ಹಚ್ಚಿದ. ಪರಿಣಾಮವಾಗಿ ಕನಿಷ್ಠ ಎಂಟು ಜನರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿ ಹಚ್ಚಿದ ಕೂಡಲೇ ದುಷ್ಕರ್ಮಿ ಪರಾರಿಯಾಗಿದ್ದ. ಪ್ರಯಾಣಿಕರು ತುರ್ತು ಸರಪಳಿ ಎಳೆದು ರೈಲು ನಿಲ್ಲಿಸಿದ್ದು, ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇದಾಗಿ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರು ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಮೂವರ ಶವಗಳು ಪತ್ತೆಯಾಗಿವೆ. ಇವರಲ್ಲಿ ಒಬ್ಬ ಪುರುಷ, ಒಬ್ಬಾಕೆ ಮಹಿಳೆ ಹಾಗೂ ಒಂದು ವರ್ಷದ ಮಗು. ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಈ ಮೂವರು ರೈಲಿನಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ರೈಲು ಕಣ್ಣೂರು ತಲುಪಿದಾಗ, ದುರ್ಘಟನೆಯ ನಂತರ ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದರು.
“ಗಾಯಗೊಂಡ ವ್ಯಕ್ತಿಯೊಬ್ಬರು ಮಹಿಳೆ ಮತ್ತು ಮಗುವನ್ನು ಹುಡುಕುತ್ತಲೇ ಇದ್ದರು. ಆ ಮಹಿಳೆಯ ಪಾದರಕ್ಷೆಗಳು ಮತ್ತು ಮೊಬೈಲ್ ಫೋನ್ ನಮಗೆ ಸಿಕ್ಕಿದೆ” ಎಂದು ಪ್ರಯಾಣಿಕರೊಬ್ಬರು ಕಣ್ಣೂರಿನಲ್ಲಿ ತಿಳಿಸಿದರು. ನಾಪತ್ತೆಯಾದವರ ಸುದ್ದಿ ಹೊರಬಿದ್ದ ಕೂಡಲೇ ಪೊಲೀಸರು ರೈಲು ಹಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ಮಗು ಮತ್ತು ಮಧ್ಯವಯಸ್ಕ ಪುರುಷರ ಮೃತದೇಹಗಳು ಪತ್ತೆಯಾದವು. ಬೆಂಕಿ ಆಕಸ್ಮಿಕದ ಬಳಿಕ ಇವರು ರೈಲಿನಿಂದ ಬಿದ್ದಿರಬಹುದು ಅಥವಾ ಇಳಿಯಲು ಪ್ರಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: Road Accident: ನಾಯಂಡಹಳ್ಳಿ ಬಳಿ ಭೀಕರ ಅಪಘಾತಕ್ಕೆ ಮಹಿಳೆ ತಲೆ ಛಿದ್ರ; ರೊಚ್ಚಿಗೆದ್ದ ಸಾರ್ವಜನಿಕರಿಂದ ಕಲ್ಲು ತೂರಾಟ