ಅಮರಾವತಿ: ಶಾಲಾ ವಿದ್ಯಾರ್ಥಿಗಳಾದ ಮೂವರು ಅಪ್ರಾಪ್ತ ಬಾಲಕರು 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ನಂದ್ಯಾಲ್ ಜಿಲ್ಲೆಯ ಪಗಿಡ್ಯಾಲ ಮಂಡಲದ ಮುಚುಮರಿ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ (Crime News).
ಭಾನುವಾರ ನಡೆದಿದ್ದ ಈ ಘಟನೆ ತಡವಾಗಿ ಬುಧವಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆ 3ನೇ ತರಗತಿ ವಿದ್ಯಾರ್ಥಿನಿ. ಇನ್ನು ಆರೋಪಿಗಳ ಪೈಕಿ ಇಬ್ಬರು 6ನೇ ತರಗತಿ (12 ವರ್ಷ) ಮತ್ತು ಓರ್ವ 7ನೇ ತರಗತಿ (13 ವರ್ಷ)ಯ ವಿದ್ಯಾರ್ಥಿಗಳು. ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಶಾಲೆಯಲ್ಲಿ ಓದುತ್ತಿದ್ದರು.
ಘಟನೆ ವಿವರ
ಭಾನುವಾರ (ಜುಲೈ 7) ಸಂತ್ರಸ್ತೆಯ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಮುಚುಮರಿಯ ಪಾರ್ಕ್ ಒಂದರಲ್ಲಿ ಆಡುತ್ತಿದ್ದ ಆಕೆ ಕಾಣೆಯಾಗಿದ್ದಾಳೆ ಎಂದು ನಂದಿಕೋಟ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಮುಚುಮರಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಸ್ಥಳೀಯರಲ್ಲಿ ಬಾಲಕಿ ಬಗ್ಗೆ ವಿಚಾರಿಸಲಾಗಿತ್ತು. ಶೋಧ ಕಾರ್ಯಕ್ಕೆ ಶ್ವಾನ ದಳವನ್ನೂ ಬಳಸಲಾಗಿತ್ತು. ಆದರೆ ಬಾಲಕಿ ಪತ್ತೆಯಾಗಿರಲಿಲ್ಲ.
ಸುಳಿವು ನೀಡಿದ ಶ್ವಾನ
ಬಾಲಕಿ ಪತ್ತೆಯಾಗದಿದ್ದರೂ ಪೊಲೀಸ್ ಶ್ವಾನ ಮಹತ್ವದ ಸುಳಿವು ನೀಡುವಲ್ಲಿ ಯಶಸ್ವಿಯಾಗಿತ್ತು. ಶ್ವಾನ ಆರೋಪಿ ಬಾಲಕರ ಬಳಿಗೆ ತೆರಳಿತ್ತು. ಅವರ ಮನೆ ಬಳಿ ನಿಂತು ಪೊಲೀಸರಿಗೆ ಸೂಚನೆ ನೀಡಿತ್ತು. ಬಳಿಕ ಪೊಲೀಸರು ಬಾಲಕನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬಾಲಕನೋರ್ವ ತಮ್ಮ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಮೃತದೇಹವನ್ನು ಕಾಲುವೆಗೆ ಎಸೆದಿರುವುದಾಗಿ ತಿಳಿಸಿದ್ದ.
ವಿಚಾರಣೆ ವೇಳೆ ಬೆಳಕಿಗೆ ಬಂತು ಭಯಾನಕ ವಿಚಾರ
ಬಳಿಕ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆ ಹಾಕಿದರು. ಈ ವೇಳೆ ಅವರು ಕೃತ್ಯದ ಬಗ್ಗೆ ವಿವರಗಳನ್ನು ಒಂದೊಂದಾಗಿ ಬಾಯ್ಬಿಟ್ಟರು. ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ಬಾಲಕಿ ಬಳಿ ಈ ಮೂವರು ತೆರಳಿದ್ದರು. ಒಂದೇ ಶಾಲೆ ಆಗಿದ್ದರಿಂದ ಬಾಲಕಿಗೂ ಅವರ ಪರಿಚಯವಿತ್ತು. ಹೀಗಾಗಿ ಅವಳೂ ಮಾತನಾಡಿಸಿದ್ದಳು. ಬಳಿಕ ಬಾಲಕರು ತಮ್ಮೊಂದಿಗೆ ಆಡಲು ಬರುವಂತೆ ಆಕೆಯನ್ನು ಜತೆಗೆ ಕರೆದೊಯ್ದರು. ನಿರ್ಜನ ಪ್ರದೇಶದಲ್ಲಿ ಅವರು ಒಬ್ಬರ ನಂತರ ಒಬ್ಬರಂತೆ ಆಕೆಯ ಮೇಲೆ ಎರಗಿದ್ದರು. ಬಳಿಕ ಆಕೆ ದೂರು ನೀಡಿದರೆ ಅರೆಸ್ಟ್ ಆಗಬಹುದೆಂಬ ಭಯದಲ್ಲಿ ಬಾಲಕರು ಆಕೆಯನ್ನು ಕೊಂದೇ ಬಿಟ್ಟರು. ಬಳಿಕ ಮೃತದೇಹವನ್ನು ನೀರಾವರಿ ಯೋಜನೆಯ ಕಾಲುವೆಗೆ ಎಸೆದು ಏನೂ ಗೊತ್ತಿಲ್ಲದವರಂತೆ ಮನೆಗೆ ಮರಳಿದ್ದರು. ಏನೂ ನಡೆದೇ ಇಲ್ಲ ಎನ್ನುವಂತೆ ಶಾಲೆಗೆ ಹೋಗಿ ಬರತೊಡಗಿದ್ದರು.
ಇದನ್ನೂ ಓದಿ: Viral News: ಶಾಕಿಂಗ್ ಘಟನೆ! ಬುದ್ಧಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ
ಸದ್ಯ ಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಲು ಶ್ರಮಿಸುವುದಾಗಿ ಶಾಸಕ ಜಿ.ಜಯಸೂರ್ಯ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.