Site icon Vistara News

Crime News: ಕಾಸಿಲ್ಲದ ಸಿಟ್ಟಿಗೆ ಕೈಲಾಸಪತಿಯ ಮೇಲೆಯೇ ಅಟ್ಯಾಕ್‌!

mp

mp

ಭೋಪಾಲ್‌: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ದೇವಾಲಯದ ಒಳಗೆ ಪ್ರತಿಷ್ಠಾಪಿಸಲಾಗಿದ್ದ ಶಿವಲಿಂಗವನ್ನು ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಜತೆಗೆ ಆತ ದೇಗುಲದ ಗೋಡೆಗೆ ಅಳವಡಿಸಿದ್ದ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾನೆ. ಸೆಂಟ್ರಲ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ (Crime News).

ಆರೋಪಿಯನ್ನು ದಿಗ್ವಿಜಯ್ ನಗರ ನಿವಾಸಿ ಗಜ್ಜು ಚೌಹಾಣ್ (26) ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ವ್ಯಕ್ತಿ ಹೂವಿನ ಪಾಟ್‌ನಿಂದ ಹೊಡೆದು ಶಿವಲಿಂಗವನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಸದ್ಯ ಆತನನ್ನು ಬಂಧಿಸಲಾಗಿದೆ.

ಕಾರಣ ಏನು?

ತನಿಖೆಯ ಸಮಯದಲ್ಲಿ ಆರೋಪಿಯು ತಾನು ದೇವರ ಬಗ್ಗೆ ಅಸಮಾಧಾನಗೊಂಡು ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ಆತನ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಮತ್ತು ಆತ ಮದ್ಯ ವ್ಯಸನಿಯಾಗಿದ್ದ. ಇದರಿಂದ ದೇವರ ಮೇಲೆ ಕುಪಿತಗೊಂಡು ಈ ಕೃತ್ಯ ಎಸಗಿದ್ದ. ಪೊಲೀಸ್‌ ಬಂಧಿಸಿದ ಬಳಿಕ ತನ್ನಿಂದ ತಪ್ಪಾಯ್ತು, ಬಿಟ್ಟು ಬಿಡಿ ಎಂದು ಅಂಗಲಾಚಿದ್ದ ಎಂದು ಮೂಲಗಳು ತಿಳಿಸಿವೆ.

ʼʼಪಾನಮತ್ತನಾಗಿದ್ದ ಆರೋಪಿ ಗುಜ್ಜು ಸೋಮವಾರ (ಜನವರಿ 29) ರಾತ್ರಿ ಹೂವಿನ ಕುಂಡ ಎಸೆದು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾನೆ. ಅಲ್ಲದೆ ದೇಗುಲದ ಹೊರಗೆ ಅಳವಡಿಸಲಾಗಿದ್ದ ಪೋಸ್ಟರ್‌ ಅನ್ನು ಹರಿದು ಹಾಕಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್‌ 295 ಅಡಿ ದೂರು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆʼʼ ಎಂದು ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ (ASI) ತುಳಸಿರಾಮ್‌ ರಘುವಂಶಿ ತಿಳಿಸಿದ್ದಾರೆ.

ವಂಚಿಸುತ್ತಿದ್ದ ಮಹಿಳೆಯ ಬಂಧನ

ಐಷರಾಮಿ ಹೋಟೆಲ್‌ನಲ್ಲಿ ತಂಗಿ ಬಿಲ್‌ ಪಾವತಿಸದೆ ವಂಚಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಮಹಿಳೆ ಇತ್ತೀಚೆಗೆ ದೆಹಲಿಯ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ ಸುಮಾರು 15 ದಿನಗಳ ಕಾಲ ತಂಗಿದ್ದಳು. ಪುಲ್ಮನ್ ಹೋಟೆಲ್‌ನ ಒಟ್ಟು ಬಿಲ್ ಸುಮಾರು 6 ಲಕ್ಷ ರೂ. ಆಗಿತ್ತು. ಅದರಲ್ಲಿ 2 ಲಕ್ಷ ರೂ. ಸ್ಪಾ ಸೇವೆಯ ಫೀಸ್‌. ಆದರೆ ಆಕೆ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಹೋಟೆಲ್‌ಗೆ ಮೋಸ ಮಾಡಿದ ಆರೋಪದ ಮೇಲೆ ಆ ಮಹಿಳೆಯನ್ನು ಬಂಧಿಸಲಾಗಿದೆ. ಈ ವೇಳೆ ಆಕೆಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇವಲ 41 ರೂ.ಗಳಿರುವುದು ಪತ್ತೆಯಾಗಿದೆ. ಇದೀಗ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು; ಬ್ರಿಟನ್‌ನಲ್ಲಿ ಭಾರತೀಯ ಮೂಲದ ದಂಪತಿಗೆ 33 ವರ್ಷಗಳ ಜೈಲು ಶಿಕ್ಷೆ

ಮಹಿಳೆಯನ್ನು ಆಂಧ್ರ ಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಆಕೆ ಡಿಸೆಂಬರ್ 13ರಂದು 15 ದಿನಗಳವರೆಗೆ ಹೋಟೆಲ್ ಅನ್ನು ಕಾಯ್ದಿರಿಸಿದ್ದಳು. ಹೋಟೆಲ್ ಸಿಬ್ಬಂದಿಯ ಪ್ರಕಾರ ಝಾನ್ಸಿ ರಾಣಿ ಸ್ಯಾಮ್ಯುಯೆಲ್ 2.11 ಲಕ್ಷ ರೂ.ಗಳ ಸ್ಪಾ ಸೇವೆಯನ್ನು ಪಡೆಯಲು ಇಶಾ ದವೆ ಎಂಬಾಕೆಯ ನಕಲಿ ಗುರುತಿನ ಚೀಟಿಯನ್ನು ಹಾಜರು ಪಡಿಸಿದ್ದಳು. ತಾನು ಐಸಿಐಸಿಐ ಬ್ಯಾಂಕ್ ಯುಪಿಐ ಅಪ್ಲಿಕೇಶನ್‌ನಲ್ಲಿ ವಹಿವಾಟು ನಡೆಸುತ್ತಿದ್ದೇನೆ ಎಂದು ಝಾನ್ಸಿ ರಾಣಿ ಸ್ಯಾಮ್ಯುಯೆಲ್‌ ಹೋಟೆಲ್‌ ಸಿಬ್ಬಂದಿ ಬಳಿ ಹೇಳಿದ್ದಳು. ಆದರೆ ಯಾವುದೇ ಪಾವತಿಯನ್ನು ಸ್ವೀಕರಿಸಿಲ್ಲ ಎನ್ನುವುದು ಬಳಿಕ ಹೋಟೆಲ್ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಇದೀಗ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version